ಮಹಾರಾಷ್ಟ್ರ ಫಲಿತಾಂಶಕ್ಕೆ ಚಂದ್ರಚೂಡ್ ಕಾರಣ: ಮಾಜಿ ಸಿಜೆಐ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ
ಮಹಾರಾಷ್ಟ್ರದಲ್ಲಿ ಈ ರೀತಿಯ ಫಲಿತಾಂಶ ಬರಲು ಮೋದಿ, ಶಾ ಹಾಗು ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರೇ ಕಾರಣ ಎಂದು ನೇರವಾಗಿ ಮಾಜಿ ಸಿಜೆಐ ಅವರ ವಿರುದ್ಧ ಶಿವಸೇನೆ ಉದ್ಧವ್ ಪಕ್ಷದ ನಾಯಕ ಸಂಜಯ್ ರಾವತ್ ಹರಿಹಾಯ್ದಿದ್ದಾರೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ತಮ್ಮ ನೇರ, ನಿಷ್ಠುರ ಹಾಗು ಕೆಲವೊಮ್ಮೆ ತೀರಾ ವಿವಾದಾತ್ಮಕ ಮಾತುಗಳಿಗಾಗಿ ಸದಾ ಸುದ್ದಿಯಲ್ಲಿರುವ ನಾಯಕ ಸಂಜಯ್ ರಾವತ್. ಶಿವಸೇನೆ ಮಾತ್ರವಲ್ಲ ಮಹಾ ವಿಕಾಸ್ ಆಘಾಡಿ ಮೈತ್ರಿಕೂ
ಈಗ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಮಹಾಯುತಿ ಪ್ರಚಂಡ ಬಹುಮತ ಪಡೆದು, ಕಾಂಗ್ರೆಸ್ ಮೈತ್ರಿಕೂಟ ಮಹಾ ವಿಕಾಸ್ ಆಘಾಡಿ ಹೀನಾಯ ಸೋಲುಂಡಿರುವಾಗ ಈ ಫಲಿತಾಂಶವನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಫಲಿತಾಂಶ ಸ್ವೀಕರಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಹಿರಿಯ ಪತ್ರಕರ್ತ ಸೋಹಿತ್ ಮಿಶ್ರಾ ಅವರೊಂದಿಗೆ ಮಾತಾಡಿರುವ ಸಂಜಯ್ ರಾವತ್ ಕಾರಣಗಳನ್ನು ನೀಡಿದ್ದಾರೆ.
ಮತ ಎಣಿಕೆಯ ದಿನ ಬೆಳಗ್ಗೆ ಒಂಬತ್ತುವರೆ ಗಂಟೆವರೆಗೂ ಹೊರ ಬರುತ್ತಿದ್ದಂತಹ ಮುನ್ನಡೆಗಳು ಎರಡೂ ಮೈತ್ರಿಕೂಟಗಳದ್ದು ಹೆಚ್ಚು ಕಡಿಮೆ ಸಮಾನವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಹತ್ತು ಗಂಟೆ ಹತ್ತು ನಿಮಿಷಕ್ಕೆ ಮಹಾಯುತಿ 211 ಕ್ಕೆ ಮತ್ತು ಮಹಾವಿಕಾಸ್ ಗಾಡಿ 54ಕ್ಕೆ ತಲುಪುತ್ತದೆ. ಇದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಮತ ನೀಡಿದ ಜನರೇ ಆಶ್ಚರ್ಯಚಕಿತರಾಗಿದ್ದಾರೆ. ಗ್ರಾಮಗಳಲ್ಲಿ ಜನರು ರಸ್ತೆಗಿಳಿದಿದ್ದಾರೆ. ಬಿಜೆಪಿಯ ಜನರೇ ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುತ್ತಿಲ್ಲ. ಅವರಿಗೇ ಏನಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಜಾರ್ಖಂಡ್ ನಲ್ಲಿ ಮತ್ತು ವಯನಾಡಿನಲ್ಲಿ ನೀವು ಇವಿಎಂ ಕುರಿತು ಯಾಕೆ ಮಾತನಾಡಲ್ಲ ಎಂಬ ಪ್ರಶ್ನೆಗೂ ರಾವತ್ ಉತ್ತರ ನೀಡಿದ್ದಾರೆ. ಅಲ್ಲಿ ಸೋತರೂ ಗೆದ್ದರೂ ಬಿಜೆಪಿಗೆ ಯಾವುದೇ ಲಾಭ ಇರಲಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಸೋತು ಹೋಗುತ್ತಿದ್ದರೆ ಮೋದಿ ಅವರ ಪ್ರಧಾನಿ ಕುರ್ಚಿ ಅಲುಗಾಡುತ್ತಿತ್ತು. ಏಕನಾಥ್ ಶಿಂಧೆ ಅವರೇನು ಬಾಳಾ ಸಾಹೇಬ್ ಠಾಕ್ರೆ ಅವರಾ ? ಶರತ್ ಪವಾರ? ಅಥವಾ ಯಶ್ವಂತ್ ರಾವ್ ಚವಾಣ ಅವರಾ ? ನೀವೇ ಹೇಳಿ ಅವರು ಜನ ಮತ ಹಾಕುವಂತ ಯಾವ ಕೆಲಸ ಮಾಡಿದ್ದಾರೆ ? ದುಡ್ಡಿನ ಪವರ್ ಹಾಗು ಇವಿಎಂ ಬಿಟ್ಟು ಅವರಲ್ಲಿ ಬೇರೇನಿದೆ ? ಎಂದು ಸಂಜಯ್ ರಾವತ್ ಅಸಮಾಧಾನ ಹೊರಹಾಕಿದ್ದಾರೆ.
ಪತ್ರಕರ್ತ ಸೋಹಿತ್ ಮಿಶ್ರ ಅವರ ಯುಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಸಂಜಯ್ ರಾವತ್ ಇನ್ನೂ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಈ ರೀತಿಯ ಗೆಲುವನ್ನು ದೇವೇಂದ್ರ ಫಡ್ನವಿಸ್ ಕೂಡ ನಿರೀಕ್ಷಿಸಿರಲಿಕ್ಕಿಲ್ಲ. ಲೋಕಸಭೆಯಲ್ಲಿ ನಮಗೆ ಹೆಚ್ಚು ಸೀಟು ಸಿಕ್ಕಿತ್ತು. ಅಷ್ಟೇ ಒಳ್ಳೆ ಪ್ರದರ್ಶನ ಈಗಲೂ ನೀಡುತ್ತೇವೆ ಎಂಬ ನಿರೀಕ್ಷೆ ನಮಗೂ ಇರಲಿಲ್ಲ. ಸಮಯ ತುಂಬಾ ಕಳೆದಿದೆ, ಬಿಜೆಪಿ ಬಗ್ಗೆ ಜನರಲ್ಲಿದ್ದಂತಹ ಸಿಟ್ಟು ಕಡಿಮೆಯಾಗಿದೆ. ಸರಕಾರ ತಂದ ಒಂದೆರಡು ಯೋಜನೆಗಳ ಪ್ರಭಾವವೂ ಇರಬಹುದು ಎಂಬುದು ನಮಗೂ ಚೆನ್ನಾಗಿ ಗೊತ್ತಿತ್ತು. ಆದರೆ ಎರಡೂ ಮೈತ್ರಿಕೂಟಗಳ ನಡುವೆ ತುಂಬಾ ಪೈಪೋಟಿ ಇತ್ತು. ಒಂಬತ್ತುವರೆ ಗಂಟೆ ವರೆಗೂ ಹೊರ ಬರುತ್ತಿದ್ದಂತಹ ಮುನ್ನಡೆಗಳು ಎರಡು ಮೈತ್ರಿ ಕೂಟಗಳಿಗೆ ಒಂದಿಷ್ಟು ಸಮಾನವಾಗಿ ಇತ್ತು. ಆದರೆ ಇದ್ದಕ್ಕಿದ್ದಂತೆ ಹತ್ತು ಹತ್ತಕ್ಕೆ ಮಹಾಯುತಿ 211 ಕ್ಕೆ ಮತ್ತು ಮಹಾವಿಕಾಸ್ ಗಾಡಿ 54ಕ್ಕೆ ತಲುಪುತ್ತದೆ. ಇದು ಹೇಗೆ ಸಾಧ್ಯ ಎಂದು ರಾವತ್ ಪ್ರಶ್ನಿಸಿದ್ದಾರೆ.
ಕೆಲವು ಕಡೆಗಳಲ್ಲಿ ತುಂಬಾ ಸಮಸ್ಯೆ ಇದೆ. ಗ್ರಾಮಗಳಲ್ಲಿ ಜನರು ರಸ್ತೆಗಿಳಿದಿದ್ದಾರೆ. ನಾವು ನೀಡಿದ ಮತಗಳು ಎಲ್ಲಿ ಅಂತ ಕೇಳುತ್ತಿದ್ದಾರೆ. ಎಂ ಎನ್ ಎಸ್ ಅಭ್ಯರ್ಥಿಯೊಬ್ಬರ ಮನೆಯಲ್ಲೇ 15 ಸದಸ್ಯರಿದ್ದಾರೆ. ಆದರೆ ಅವರಿಗೆ ಕೇವಲ ಎರಡು ಮತ ಸಿಕ್ಕಿದೆ. ನಾಸಿಕ್ ನಲ್ಲಿ ಒಂದು ಕಡೆ ಒಬ್ಬರ ಕುಟುಂಬದಲ್ಲೇ 65 ಜನರಿದ್ದಾರೆ ಆದರೆ ಅವರಿಗೆ ಕೇವಲ ನಾಲ್ಕು ಮತ ಸಿಕ್ಕಿದೆ. ಇದು ಹೇಗೆ ಸಾಧ್ಯ? ಈ ರೀತಿಯ 400 ಕ್ಕೂ ಹೆಚ್ಚು ದೂರುಗಳು ನಮ್ಮ ಬಳಿ ಬಂದಿವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಇನ್ನು ಮತದಾನ ಶೇಕಡ ಹೆಚ್ಚಳದ ಕುರಿತೂ ಸಂಜಯ್ ರಾವತ್ ಪ್ರಶ್ನೆ ಎತ್ತಿದ್ದಾರೆ. ಏನು ಜಾದು ಮಾಡಿ ವೋಟ್ ಹೆಚ್ಚಿಸಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಮತದಾನ ಮುಕ್ತಾಯವಾದ ಅಕ್ಟೊಬರ್ 20 ರಂದು ಸಂಜೆ 5 ಗಂಟೆಗೆ 58.22% ಮತದಾನವಾಗಿದೆ ಎಂದರು. ಅದೇ ದಿನ ರಾತ್ರಿ 11.30 ಕ್ಕೆ 65.02 % ಮತದಾನ ಆಗಿದೆ ಎಂದರು. ಅಂದರೆ ಹೆಚ್ಚು ಕಡಿಮೆ 8% ಮತದಾನ ಹೆಚ್ಚಳ ಆಗಿದ್ದು ಹೇಗೆ ? ಅಂದ್ರೆ ಸುಮಾರು ಒಂದೂವರೆ ಕೋಟಿ ಮತಗಳು ಹೆಚ್ಚಿದ್ದು ಹೇಗೆ ? ಅಷ್ಟೊಂದು ಮತಗಳ ಸಂಖ್ಯೆ ಹೆಚ್ಚಳವಾದರೆ ಇದೇ ರೀತಿಯ ಫಲಿತಾಂಶ ಬರಬೇಕಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಇವಿಎಂ ತೆಗೆದುಹಾಕಬೇಕು. ಪ್ರಗತಿಪರ ಪ್ರಜಾಪ್ರಭುತ್ವಗಳು ಇವಿಎಂ ನಲ್ಲಿ ಚುನಾವಣೆ ನಡೆಸಲ್ಲ. ಜಪಾನಿನಲ್ಲಿ ಪಾರದರ್ಶಕತೆ ಇಲ್ಲ ಎಂದು ಹೇಳಿ ಇವಿಎಂ ತೆಗೆದುಹಾಕಿದ್ದಾರೆ. ಜಗತ್ತಿನ ಅತ್ಯಂತ ತಾಂತ್ರಿಕವಾಗಿ ಅತ್ಯಂತ ಮುಂದಿರುವ ದೇಶಗಳೇ ಇವಿಎಂ ನಲ್ಲಿ ಚುನಾವಣೆ ನಡೆಸುತ್ತಿಲ್ಲ. ಎಲಾನ್ ಮಸ್ಕ್ ಕೂಡ ಇವಿಎಂ ವಿರುದ್ಧ ಮಾತನಾಡಿದ್ದಾರೆ. ಇವರಿಗೆಲ್ಲಾ ಏನು ಹುಚ್ಚು ನಾಯಿ ಕಚ್ಚಿದೆಯಾ ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರೇ ಇವಿಎಂ ವಿರುದ್ಧ ಮಾತನಾಡಿದ್ದಾರೆ. ಪುಸ್ತಕಗಳನ್ನು ಬರೆದಿದ್ದಾರೆ ಎಂದು ಹೇಳುತ್ತಾ ಬ್ಯಾಲಟ್ ಪೇಪರ್ ನಲ್ಲಿ ಚುನಾವಣೆ ನಡೆಸಬೇಕೆಂದು ಸಂಜಯ್ ರಾವತ್ ಆಗ್ರಹಿಸಿದ್ದಾರೆ .
ಶರದ್ ಪವಾರ್ ಎಷ್ಟು ಪ್ರಭಾವಿ ನಾಯಕ ಅವರ ಸಭೆಗಳಲ್ಲಿ ಅದೆಷ್ಟು ಜನ ಸೇರುತ್ತಿದ್ದರು ಅಂತ ನೀವೇ ನೋಡಿದ್ದೀರಿ. ಅವರ ಪಕ್ಷ ಲೋಕಸಭೆಯಲ್ಲಿ ಹತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಂಟರಲ್ಲಿ ಗೆದ್ದಿದೆ. ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಹತ್ತು ಸೀಟು ಬರೋದು ಅಂದ್ರೆ ನಂಬಲು ಸಾಧ್ಯವೇ ಎಂದು ರಾವತ್ ಆಶ್ವರ್ಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆಲ್ಲಾ ನೇರ ಹೊಣೆ ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್. ಅವರು ಸರಿಯಾದ ಸಮಯದಲ್ಲಿ ನಿಜವಾದ ಶಿವಸೇನೆ ಯಾರು? ಎನ್ ಸಿ ಪಿ ಯಾರು ಅಂತ ಹೇಳುತ್ತಿದ್ದರೆ ಹೀಗೇನೂ ಆಗುತ್ತಿರಲಿಲ್ಲ. ಈಗ ಯಾರೂ ಯಾವತ್ತೂ ಯಾವುದೇ ಭಯ ಇಲ್ಲದೇ ಪಕ್ಷ ಬದಲಿಸಬಹುದು. ಇದಕ್ಕೆ ನೇರ ಕಾರಣ ಡಿ ವೈ ಚಂದ್ರಚೂಡ್ ಎಂದು ರಾವತ್ ಹೇಳಿದ್ದಾರೆ.
ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆಯ 40ಕ್ಕೂ ಹೆಚ್ಚು ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ ವಿಷಯ ಸುಪ್ರೀಂ ಕೋರ್ಟ್ ನಲ್ಲಿತ್ತು. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಉದ್ಧವ್ ಠಾಕ್ರೆ ಕೇಳಿಕೊಂಡಿದ್ದರು. ಆದರೆ ಅದರ ಅಧಿಕಾರವನ್ನು ಮಹಾರಾಷ್ಟ್ರ ಸ್ಪೀಕರ್ ಕೊಟ್ಟು ಬಿಟ್ಟಿತು. ಸಿಜೆಐ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ. ಈಗ ಅದನ್ನೇ ಸಂಜಯ್ ರಾವತ್ ಉಲ್ಲೇಖಿಸಿ ಮಹಾರಾಷ್ಟ್ರ ಮೂಲದ ನಿಕಟಪೂರ್ವ ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್ ವಿರುದ್ಧ ಹರಿಹಾಯ್ದಿದ್ದಾರೆ.
ನಾವು ಉದ್ಧವ್ ಠಾಕ್ರೆ ಶಿವಸೇನೆ 50, ಕಾಂಗ್ರೆಸ್ 60 ಮತ್ತು ಶರದ್ ಪವಾರ್ ಎನ್ ಸಿ ಪಿ 40 ಸೀಟ್ ಗೆಲ್ಲುವ ನಿರೀಕ್ಷೆ ಇಟ್ಟಿದ್ದೆವು. ಆದರೆ ಈ ಫಲಿತಾಂಶ ಎಲ್ಲರ ನಿರೀಕ್ಷೆಯನ್ನು ಮೀರಿ ಬಂದಿದೆ. ಹೀಗಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ರಾವತ್.
ಅದಾನಿಯ ಎಲ್ಲಾ ಹೂಡಿಕೆ ಮಹಾರಾಷ್ಟ್ರದಲ್ಲಿ ಇರುವುದರಿಂದ ಬಿಜೆಪಿಗೆ ಮಹಾರಾಷ್ಟ್ರ ಗೆಲ್ಲುವುದು ಅನಿವಾರ್ಯವಾಗಿತ್ತು ಎಂದು ರಾವತ್ ಹೇಳಿದ್ದಾರೆ. ನಾವು ಇಡೀ ರಾಜ್ಯದಿಂದ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಅದರ ಬಗ್ಗೆ ಚರ್ಚಿಸುತ್ತೇವೆ. ಇದನ್ನು ಸುಮ್ಮನೆ ಬಿಡೋದಿಲ್ಲ. ನಾಳೆ ದಿಲ್ಲಿಗೆ ಹೋಗಿ ರಾಹುಲ್ ಗಾಂಧಿ ಅವರ ಜೊತೆಗೂ ಚರ್ಚಿಸುತ್ತೇವೆ. ಇವರ ವಂಚನೆ ವಿರುದ್ಧ ನಾವು ಈ ಬಗ್ಗೆ ಎಲ್ಲ ರೀತಿಯ ಹೋರಾಟಕ್ಕೆ ಸಜ್ಜಾಗಿದ್ದೇವೆ. ಹೋರಾಡದಿದ್ದರೆ ಈ ದೇಶ ಉಳಿಯದು, ಇಲ್ಲಿ ಪ್ರಜ್ರಪ್ರಭುತ್ವ ಉಳಿಯದು ಎಂದು ಸಂಜಯ್ ರಾವತ್ ಹೇಳಿದ್ದಾರೆ.