ಭಾರತದ ಆರ್ಥಿಕತೆ ತೀವ್ರ ಅಸ್ವಸ್ಥಗೊಂಡಿರುವ ಲಕ್ಷಣಗಳು ಕಾಣಿಸುತ್ತಿವೆ: ರಘುರಾಮ್ ರಾಜನ್

Update: 2019-10-12 10:03 GMT

ಹೊಸದಿಲ್ಲಿ: ಭಾರತದ ಆರ್ಥಿಕತೆ ತೀವ್ರ ಅಸ್ವಸ್ಥಗೊಂಡಿರುವ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಬ್ರೌನ್ ವಿಶ್ವವಿದ್ಯಾಲಯದ ವಾಟ್ಸನ್ ಇನ್‍ಸ್ಟಿಟ್ಯೂಟ್‍ನಲ್ಲಿ ಒ.ಪಿ ಜಿಂದಾಲ್ ಉಪನ್ಯಾಸ ನೀಡಿದ ಅವರು ದೇಶದ ಆರ್ಥಿಕತೆಯ ಸ್ಥಿತಿ  ಕಳವಳಕಾರಿಯಾಗಿದೆ. ಅಭಿವೃದ್ಧಿ ನಿಧಾನಗತಿ ಪಡೆದಿದೆ. ವಿತ್ತೀಯ ಕೊರತೆ ಬಹಳಷ್ಟನ್ನು 'ಅಡಗಿಸಿದೆ' ಹಾಗೂ ಹೆಚ್ಚುತ್ತಿರುವ ಸಾಲದ ಪ್ರಮಾಣ ಕೂಡ ಆತಂಕ ಉಂಟು ಮಾಡುತ್ತಿದೆ ಎಂದು ಹೇಳಿದರು.

'ಭಾರತ ಯಾವುದೇ ಆರ್ಥಿಕ ಗುರಿಯಿಲ್ಲದೆ ಅಧಿಕಾರವನ್ನು ಕೇಂದ್ರೀಕರಿಸುತ್ತಿರುವುದರಿಂದ ತನ್ನ ಆರ್ಥಿಕ ಪಥವನ್ನು ಕಳೆದುಕೊಳ್ಳುತ್ತಿದೆ. ವಿತ್ತೀಯ ಕೊರತೆ  ಹೆಚ್ಚಾಗಿರುವುದರಿಂದ ಅಭಿವೃದ್ಧಿ ಪ್ರಮಾಣ ಏರಿಕೆಗೆ ಹೆಚ್ಚು ಅವಕಾಶವಿಲ್ಲದಂತಾಗಿದೆ'' ಎಂದರು.

"ರಾಜ್ಯಗಳು ಹಾಗೂ ಕೇಂದ್ರದ ಒಟ್ಟಾರೆ ಶೇ/7ರಷ್ಟು ವಿತ್ತೀಯ ಕೊರತೆಗಿಂತ ವಾಸ್ತವ ವಿತ್ತೀಯ ಕೊರತೆ ಬಹಳಷ್ಟು ಹೆಚ್ಚಾಗಿರಬಹುದು' ಎಂದು ರಾಜನ್ ಹೇಳಿದರು.

ಈಗಿನ ಆರ್ಥಿಕ ನಿಧಾನಗತಿಗೆ ಹೂಡಿಕೆಗಳ ಕುಸಿತ, ಗ್ರಾಹಕರ ಬೇಡಿಕೆಯಲ್ಲಿ ಇಳಿಕೆ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಬಿಕ್ಕಟ್ಟು ಕಾರಣ ಎಂದು ಹೇಳಿದ ರಾಜನ್, ಅಮಾನ್ಯೀಕರಣ ಹಾಗೂ ಜಿಎಸ್‍ಟಿ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ಇತ್ತೀಚಿಗಿನ ಕಾರ್ಪೊರೇಟ್ ತೆರಿಗೆ ಕಡಿತ ಪ್ರಯೋಜನಕಾರಿಯಾದರೂ ತೆರಿಗೆಗಳಲ್ಲಿ ಉಂಟಾಗಬಹುದಾದ ಬದಲಾವಣೆಗಳ ಕುರಿತಾದ ಅನಿಶ್ಚಿತತೆ  ನಿರಾಸೆಯುಂಟು ಮಾಡಬಹುದು ಎಂದು ಹೇಳಿದರು. ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆಗಳೇರಿಕೆಯಾಗಿವೆ ಎಂಬ ಒಂದೇ ಕಾರಣಕ್ಕೆ ಕೃಷಿ ಉತ್ಪನ್ನಗಳ ರಫ್ತು ನಿಷೇಧಿಸಿರುವುದನ್ನು ರಾಜನ್ ಟೀಕಿಸಿದರು.

ರಫ್ತು ನಿಷೇಧದಿಂದ ಬಡ ರೈತನಿಗೆ ಸಮಸ್ಯೆಯಾಗುತ್ತದೆ. ಚುನಾವಣೆಗಳ ವೇಲೆ ಈರುಳ್ಳಿ ಬೆಲೆಗಳೂ ಪರಿಣಾಮ ಬೀರುವುದರಿಂದ ಸರಕಾರ ರೈತರ ಹಿತಾಸಕ್ತಿಗಿಂತ ಗ್ರಾಹಕರ ಹಿತಾಸಕ್ತಿಗೆ ಹೆಚ್ಚು ಮಹತ್ವ ನೀಡುತ್ತಿದೆ ಎಂದು ರಾಜನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News