ಶಾಲೆಗೆ ಭೇಟಿಯ ವೇಳೆ ಕೋಳಿ ಸಾರು ಸೇವಿಸಿದ ಅಧಿಕಾರಿಯ ಅಮಾನತು

Update: 2019-10-12 17:24 GMT

ಭುವನೇಶ್ವರ, ಅ.12: ಶಾಲೆಗೆ ಭೇಟಿ ನೀಡಿದ್ದ ವೇಳೆ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಅನ್ನ ಮತ್ತು ಸಾಂಬಾರ್ ಸೇವಿಸುತ್ತಿದ್ದರೆ ತಾನು ಮಾತ್ರ ಕೋಳಿ ಸಾರು ಸೇವಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಯನ್ನು ಅಮಾನತುಗೊಳಿಸಿದ ಘಟನೆ ಒಡಿಶಾದ ಸುಂದರ್‌ಗಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಬೊನೈಯ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ಬಿನಾಯ್ ಪ್ರಕಾಶ್ ಸೋಯ್ ಸದ್ಯ ಅಮಾನತುಗೊಂಡ ಅಧಿಕಾರಿಯಾಗಿದ್ದು, ಇವರು ಮಕ್ಕಳ ಜೊತೆ ಕುಳಿತು ಹೊರಗಿನಿಂದ ತರಿಸಲ್ಪಟ್ಟ ಕೋಳಿ ಸಾರು ಸೇವಿಸುತ್ತಿರುವ ವೀಡಿಯೊ ವೈರಲ್ ಆದ ನಂತರ ಸುಂದರ್‌ಗಡ್ ಜಿಲ್ಲಾಯುಕ್ತ ನಿಖಿಲ್ ಕಲ್ಯಾಣ್ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಬೊನೈಯ ತಿಲೈಮಲ್ ಪ್ರೋಜೆಕ್ಟ್ ಪ್ರಾಥಮಿಕ ಶಾಲೆಗೆ ಅಕ್ಟೋಬರ್ 3ರಂದು ಬಿಇಒ ಭೇಟಿ ನೀಡಿದ್ದ ಈ ಘಟನೆ ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪರಿಶೀಲಿಸಲು ಸೋಯ್ ಶಾಲೆಗೆ ಭೇಟಿ ನೀಡಿದ್ದರು. ಈ ಆರೋಪವನ್ನು ತಳ್ಳಿ ಹಾಕಿರುವ ಸೋಯ್, “ನನಗೆ ನೀಡಿದ್ದು ಕೋಳಿ ಸಾರಲ್ಲ. ಅದು ಶಾಲೆಯ ಶಿಕ್ಷಕಿಯೊಬ್ಬರು ನನಗೆಂದು ಮನೆಯಿಂದ ಮಾಡಿ ತಂದಿದ್ದ ತರಕಾರಿ ಸಾಂಬಾರ್” ಆಗಿತ್ತು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News