ತಿಹಾರ್ ಜೈಲು ಸೇರಿದ್ದರು ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ !

Update: 2019-10-15 03:39 GMT

ಹೊಸದಿಲ್ಲಿ: ಆರ್ಥಿಕ ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಈ ಬಾರಿಯ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಭಿಜಿತ್ ಬ್ಯಾನರ್ಜಿ, ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿದ್ದಾಗ ಕುಲಪತಿ ವಿರುದ್ಧ ಘೆರಾವ್ ನಡೆಸಿ ದೆಹಲಿಯ ತಿಹಾರ್ ಜೈಲು ಸೇರಿದ್ದರು !

ಎಸ್ತರ್ ಡ್ಯುಫ್ಲೋ ಮತ್ತು ಮೈಕೆಲ್ ಕ್ರೆಮೆರ್ ಜತೆ ಸೇರಿ ಜಾಗತಿಕ ಬಡತನ ನಿರ್ಮೂಲನೆಗಾಗಿ ನಡೆಸಿದ ಹೋರಾಟಕ್ಕಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿರುವ ಅಭಿಜಿತ್ ಬ್ಯಾನರ್ಜಿ, ಮೂರು ವರ್ಷಗಳ ಹಿಂದೆ ಬರೆದ ಲೇಖನವೊಂದರಲ್ಲಿ ಹೇಗೆ ಪೊಲೀಸರು ತಮ್ಮನ್ನು ಹೊಡೆದಿದ್ದರು ಎನ್ನುವುದನ್ನು ವಿವರಿಸಿದ್ದರು.

ಹಾಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಶಿಕ್ಷಣ ಮುಗಿಸುವ ಒಂದು ವರ್ಷ ಮುನ್ನ ಅಂದರೆ 1983ರಲ್ಲಿ ಅಭಿಜಿತ್ ಬ್ಯಾನರ್ಜಿ ಶಿಕ್ಷಣ ಪೂರೈಸಿದ್ದರು. ಕೇಂದ್ರೀಯ ವಿವಿಯಲ್ಲಿ ಬ್ಯಾನರ್ಜಿ ಅರ್ಥಶಾಸ್ತ್ರ ಎಂಎ ಪದವಿ ಪಡೆದರೆ, ಸೀತಾರಾಮನ್, ಅಂತರ್ ರಾಷ್ಟ್ರೀಯ ಅಧ್ಯಯನದಲ್ಲಿ 1984ರಲ್ಲಿ ಎಂಫಿಲ್ ಪದವಿ ಪಡೆದಿದ್ದರು.

"1983ರ ಬೇಸಿಗೆಯ ಒಂದು ದಿನ ಜೆಎನ್‌ಯು ವಿದ್ಯಾರ್ಥಿಗಳಾಗಿದ್ದ ನಾವು ಕುಲಪತಿಗಳ ಮನೆಗೆ ಮುತ್ತಿಗೆ ಹಾಕಿದ್ದೆವು. ಇದಕ್ಕೆ ಕಾರಣ, ಅಂದಿನ ಕನ್ಹಯ್ಯ ಕುಮಾರ್ ಎನಿಸಿದ್ದ ವಿದ್ಯಾರ್ಥಿ ಸಂಘದ ಅಧ್ಯಕ್ಷರನ್ನು ಡಿಬಾರ್ ಮಾಡಿದ್ದು" ಎಂದು ಹಿಂದೂಸ್ತಾನ್ ಟೈಮ್ಸ್‌ನ ಫೆಬ್ರವರಿ 2016ರ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ ವಿವರಿಸಿದ್ದರು.

ಆ ವೇಳೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಘೆರಾವ್ ನಡೆಸಿದ ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿತ್ತು. ನೂರಾರು ಮಂದಿಯ ಜತೆಗೆ ಅಭಿಜಿತ್ ಬ್ಯಾನರ್ಜಿಯವರನ್ನು ಕೂಡಾ ಬಂಧಿಸಲಾಗಿತ್ತು. ಬಳಿಕ ತಿಹಾರ್ ಜೈಲಿಗೆ ಒಯ್ದು 10 ದಿನಗಳ ಕಾಲ ಕೂಡಿ ಹಾಕಲಾಗಿತ್ತು. ಆಗ ಪೊಲೀಸರು ಚೆನ್ನಾಗಿ ಥಳಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

"ನನ್ನನ್ನು ತಿಹಾರ್ ಜೈಲಿಗೆ ತಳ್ಳಲಾಗಿತ್ತು. ದೇಶದ್ರೋಹ ಪ್ರಕರಣ ದಾಖಲಿಸಿರಲಿಲ್ಲ. ಬದಲಾಗಿ ಕೊಲೆಯತ್ನ ಮತ್ತು ದೊಂಬಿ ಆರೋಪ ಹೊರಿಸಲಾಗಿತ್ತು. ಬಳಿಕ ಆರೋಪ ಸಾಬೀತಾಗಲಿಲ್ಲ. ಆದರೆ ಅದಕ್ಕೂ ಮುನ್ನ 10 ದಿನ ತಿಹಾರ್ ಜೈಲಿನಲ್ಲಿ ಕಳೆದಿದ್ದೆವು" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News