ಭಾರತಕ್ಕೆ ಬರಲಿದೆ ವಿಶ್ವದ ಅತಿದೊಡ್ಡ ಮುಖಪತ್ತೆ ವ್ಯವಸ್ಥೆ

Update: 2019-10-22 03:36 GMT

ಹೊಸದಿಲ್ಲಿ, ಅ.22: ಅಪರಾಧಿಗಳ ಜಾಡು ಹಿಡಿದು ಬೇಟೆಯಾಡಲು ಅನುಕೂಲವಾಗುವಂತೆ ವಿಶ್ವದ ಅತಿದೊಡ್ಡ ಮುಖ ಪತ್ತೆ ವ್ಯವಸ್ಥೆ(face recognition system)ಯನ್ನು ಅಳವಡಿಸಿಕೊಳ್ಳಲು ಭಾರತ ಸಜ್ಜಾಗಿದೆ. ರಾಷ್ಟ್ರೀಯ ಸ್ವಯಂಚಾಲಿತ ಮುಖ ಗುರುತಿಸುವಿಕೆ ವ್ಯವಸ್ಥೆ (ಎಎಫ್‌ಆರ್‌ಎಸ್) ಖರೀದಿ ಸಂಬಂಧ ಟೆಂಡರ್‌ಗಳನ್ನು ಸಲ್ಲಿಸಲು ನವೆಂಬರ್ 8 ಕೊನೆಯ ದಿನ.

ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಜುಲೈ 8ರಂದು ಈ ಸಂಬಂಧ ಟೆಂಡರ್ ಕರೆದಿದ್ದು, ನವೆಂಬರ್ 8ರಂದು ಎಎಫ್‌ಆರ್‌ಎಸ್ ಪೂರೈಸುವ ಸಂಸ್ಥೆಯ ಹೆಸರನ್ನು ಪ್ರಕಟಿಸಲಿದೆ.

"ಭಾರತದ ಪೊಲೀಸ್ ಪಡೆಯನ್ನು ಆಧುನೀಕರಿಸುವ, ಮಾಹಿತಿ ಕಲೆ ಹಾಕುವ, ಅಪರಾಧಿಗಳ ಗುರುತು ಪತ್ತೆಹಚ್ಚುವ, ದೃಢೀಕರಿಸುವ ಮತ್ತು ವಿವಿಧ ಪೊಲೀಸ್ ಇಲಾಖೆಗಳ ನಡುವೆ ಇದನ್ನು ಪಸರಿಸುವ ನಿಟ್ಟಿನಲ್ಲಿ ಇದು ದೊಡ್ಡ ಪ್ರಯತ್ನ" ಎಂದು ಎನ್‌ಸಿಆರ್‌ಬಿ ಹೇಳಿದೆ.
ಗೃಹ ವ್ಯವಹಾರಗಳ ಸಚಿವಾಲಯ ಎನ್‌ಸಿಆರ್‌ಬಿ ಮತ್ತು ರಾಜ್ಯ ಪೊಲೀಸ್ ಇಲಾಖೆಗಳಿಗೆ ಇದರಿಂದ ಲಾಭವಾಗಲಿದೆ.

"ಈ ಅತ್ಯಾಧುನಿಕ ವ್ಯವವಸ್ಥೆಯಿಂದ ದೇಶಾದ್ಯಂತ ಅಪರಾಧಿಗಳನ್ನು, ನಾಪತ್ತೆಯಾದ ಮಕ್ಕಳು/ ವ್ಯಕ್ತಿಗಳನ್ನು, ಅಪರಿಚಿತ ಮೃತದೇಹಗಳನ್ನು ಮತ್ತು ಪತ್ತೆಯಾದ ಅಪರಿಚಿತ ಮಕ್ಕಳ/ ವ್ಯಕ್ತಿಗಳ ಗುರುತು ಪತ್ತೆ ಮಾಡಲು ಸಾಧ್ಯವಾಗಲಿದೆ. ದೇಶದಲ್ಲಿ ಅಪರಾಧಿಗಳ ಭಾವಚಿತ್ರಗಳ ಸಂಗ್ರಹ ಸಾಧ್ಯವಾಗಲಿದೆ. ಅಪರಾಧ ವಿಧಾನಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಹೆಚ್ಚಲಿದ್ದು, ಈ ಸಮಗ್ರ ಮಾಹಿತಿಗಳು ರಾಜ್ಯ ಪೊಲೀಸ್ ಇಲಾಖೆಗಳ ಅಪರಾಧ ತಡೆಗೆ ಪೂರಕವಾಗಲಿವೆ" ಎಂದು ಎನ್‌ಸಿಆರ್‌ಬಿ ವಿವರಿಸಿದೆ.

ಈ ವಿಶಿಷ್ಟ ಸಾಫ್ಟ್‌ವೇರ್ ಸಹಾಯದಿಂದ ರಾಜ್ಯ ಪೊಲೀಸ್ ಸಿಬ್ಬಂದಿ ಶಂಕಿತರನ್ನು ಅಪರಾಧಿಗಳ ಹಾಟ್‌ಲಿಸ್ಟ್‌ನಲ್ಲಿ ಗುರುತಿಸಬಹುದಾಗಿದೆ.

ಅಮೆಝಾನ್ ರೆಕೊಗ್ನಿಶನ್, ಲಂಬ್ಡಾ ಲ್ಯಾಬ್‌ನ ಮುಖಪತ್ತೆ ಮತ್ತು ಗುರುತಿಸುವಿಕೆ ವ್ಯವಸ್ಥೆ, ಮೈಕ್ರೋಸಾಫ್ಟ್ ಫೇಸ್ ಎಪಿಐ, ಗೂಗಲ್ ಕ್ಲೌಡ್ ವಿಷನ್ ಮತ್ತು ಐಬಿಎಂ ವಾಟ್ಸನ್ ವಿಷುವಲ್ ರೆಕೊಗ್ನಿಶನ್ ಮತ್ತಿತರ ವ್ಯವಸ್ಥೆಗಳು ವಿಶ್ವದಲ್ಲಿ ಬಳಕೆಯಲ್ಲಿರುವ ಅಗ್ರಗಣ್ಯ ವ್ಯವಸ್ಥೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News