ಟಿಪ್ಪು ಸುಲ್ತಾನ್ ಸುತ್ತ ಮತ್ತೆ ವಿವಾದದ ಹುತ್ತ

Update: 2019-11-04 04:33 GMT

ಟಿಪ್ಪು ಸುಲ್ತಾನ್ ವಿನಯಶೀಲನಾಗಿದ್ದ, ಪುಸ್ತಕಪ್ರೇಮಿಯಾಗಿದ್ದ. ಶ್ರೀರಂಗಪಟ್ಟಣದಲ್ಲಿ ಅವನ ಅರಮನೆಯಲ್ಲಿ ಅತ್ಯುತ್ತಮ ವಾದ ಗ್ರಂಥ ಭಾಂಡಾರವಿತ್ತು. ಟಿಪ್ಪು ತನ್ನ ಸಮಕಾಲೀನ ಅರಸರಿಗೆ ಬರೆದ ಪತ್ರಗಳ ರಾಶಿಯೇ ಇತ್ತು. ಆದರೆ, ಟಿಪ್ಪು ಪತನದ ನಂತರ ಬ್ರಿಟಿಷರು ಅದನ್ನು ಲಂಡನ್ ಗೆ ಕೊಂಡೊಯ್ದರು. ನಮ್ಮ ಸರ್ಕಾರ ಅದನ್ನು ವಾಪಸು ತರುವ ಪ್ರಯತ್ನ ಮಾಡಲಿಲ್ಲ. ಈಗಂತೂ ಹಿಂದೆ ಬ್ರಿಟಿಷರ ಪಾದ ಸೇವೆ ಮಾಡಿದವರು ಅಧಿಕಾರದಲ್ಲಿದ್ದಾರೆ. ಟಿಪ್ಪು ಹೆಸರನ್ನೇ ಅಳಿಸಿ ಹಾಕಲು ಹೊರಟಿದ್ದಾರೆ.


ಮೂರು ತಿಂಗಳಾದರೂ ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸಲಾಗದ ರಾಜ್ಯದ ಬಿಜೆಪಿ ಸರಕಾರಕ್ಕೆ ಮತ್ತೆ ಟಿಪ್ಪು ಸುಲ್ತಾನ್ ನೆನಪಾಗಿದೆ. ಮೈಸೂರು ಹುಲಿ ಎಂದು ಹೆಸರಾದ ಟಿಪ್ಪು ಹುತಾತ್ಮನಾಗಿ 2ಂಂ ವರ್ಷಗಳಾದ ನಂತರ ವರ್ತಮಾನದ ಸವಾಲುಗಳನ್ನು ಭೂತಕಾಲದ ಚರಿತ್ರೆಯ ಮೂಲಕ ಎದುರಿಸಲು ಹೊರಟಿರುವ ಈ ಸರಕಾರವನ್ನು ಅಗೋಚರ ಸಂವಿಧಾನೇತರ ಅಧಿಕಾರ ಕೇಂದ್ರವೊಂದು ನಿಯಂತ್ರಿಸುತ್ತಿದೆ. ಇಂದಿನ ಟಿಪ್ಪು ವಿವಾದದ ಹಿಂದಿರುವುದು ಅದೇ ಕರಾಳ ಹಸ್ತ, ಹಿಂದಿನ ಸಿದ್ದರಾಮಯ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾದಾಗ ಇದೇ ಕರಾಳ ಶಕ್ತಿಗಳು ಕೊಡಗಿನಲ್ಲಿ, ಹಿಂಸೆಯನ್ನು ಕೆರಳಿಸಿ ಅಮಾಯಕರ ಸಾವಿಗೆ ಕಾರಣವಾದವು. ಈಗ ಅದೇ ಸಮಾಜ ವಿರೋಧಿ ಶಕ್ತಿಗಳು ಮತ್ತೆ ಕ್ಯಾತೆ ತೆಗೆದಿವೆ.

ಟಿಪ್ಪು ಜಯಂತಿಯನ್ನು ಆಚರಿಸುವುದು ಅಥವಾ ಬಿಡುವುದು ಆಯಾ ಸರಕಾರದ ತೀರ್ಮಾನ. ಬಿಜೆಪಿ ಸರಕಾರಕ್ಕೆ ಬೇಡವಾಗಿದ್ದರೆ ಬಿಡಲಿ. ಆದರೆ, ಇವರ ಕುಚೇಷ್ಟೆ ಅಷ್ಟಕ್ಕೆ ನಿಂತಿಲ್ಲ. ಈ ಬಾರಿ ಕೊಡಗಿನ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ಹೇಳಿಕೆಯೊಂದನ್ನು ನೀಡಿಸಿ, ಶಾಲಾ ಪಠ್ಯಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ ಇತಿಹಾಸವನ್ನು ತೆಗೆದು ಹಾಕಲು ಒತ್ತಾಯಿಸಲಾಗಿದೆ.

ಈ ಶಾಸಕ ಹೇಳಿದ ತಕ್ಷಣ ತಡವರಿಸಿ ಎದ್ದ ಸಿಎಂ ಯಡಿಯೂರಪ್ಪ ಈ ವರ್ಷದಿಂದ ಶಾಲಾ ಪಠ್ಯದಲ್ಲಿ ಟಿಪ್ಪುವಿನ ಇತಿಹಾಸದ ಪುಟಗಳನ್ನು ತೆಗೆದು ಹಾಕುವುದಾಗಿ ಹೇಳಿದ್ದಾರೆ. ಶಿಕ್ಷಣ ಸಚಿವ ಸುರೇಶಕುಮಾರ ಈ ಬಗ್ಗೆ ಪರಿಶೀಲನೆಗೆ ರಚಿಸಲಾದ ಸಮಿತಿ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ. ರಾಜ್ಯ ಸರಕಾರದ ಈ ತೀರ್ಮಾನ ಅಪಹಾಸ್ಯ ುತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಂವಿಧಾನವನ್ನು ಪಕ್ಕಕ್ಕೆ ಇಟ್ಟು ನಾಗಪುರದ ನಿಗೂಢ ಕೇಂದ್ರದ ಅಜೆಂಡಾ ಜಾರಿಗೆ ತರಲು ಹೊರಟ ಸರಕಾರಕ್ಕೆ ತಾನೇನು ಮಾಡುತ್ತಿದೆ ಎಂಬ ಖಬರಿಲ್ಲ.

ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಪಾಠ ತೆಗೆದು ಹಾಕಿದ ತಕ್ಷಣ ಹೈದರ್ ಮತ್ತು ಟಿಪ್ಪು ಇತಿಹಾಸ ಸುಳ್ಳಾಗುವುದಿಲ್ಲ. ಟಿಪ್ಪು ಬ್ರಿಟಿಷ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ್ದು, ಹೋರಾಡುತ್ತಲೇ ರಣರಂಗದಲ್ಲಿ ಪ್ರಾಣಬಿಟ್ಟಿದ್ದು, ಎಳೆ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟಿದ್ದು, ಮಹಾರಾಷ್ಟ್ರದ ಪೇಶ್ವೆ ಬಾಜಿರಾವ್ ದೋಚಿಕೊಂಡು ಹೋಗಿದ್ದ ಶೃಂಗೇರಿ ಶಾರದಾ ಮಂದಿರಕ್ಕೆ ಟಿಪ್ಪು ನೆರವು ನೀಡಿದ್ದು ಹೀಗೆ ನೂರಾರು ಸಂಗತಿಗಳು ಸರಕಾರದ ಒಂದು ಅವಿವೇಕದ ತೀರ್ಮಾನದಿಂದ ಸುಳ್ಳಾಗುವುದಿಲ್ಲ.

 ಹಾಗೆ ನೋಡಿದರೆ ಟಿಪ್ಪು ಸುಲ್ತಾನನ ಸುತ್ತ ವಿವಾದದ ಧೂಳೆದ್ದಿದ್ದು 9ಂರ ದಶಕದ ನಂತರ. ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಳಿಸಿ ವೊಟಿನ ಬೆಳೆ ತೆಗೆದ ಸಂಘಪರಿವಾರ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಅಧಿಕಾರ ಹಿಡಿಯಬಹುದು. ಆ ಮೂಲಕ ಮನುವಾದಕ್ಕೆ ಮತ್ತೆ ಪುನಶ್ಚೇತನ ನೀಡುವ ಹಿಂದು ರಾಷ್ಟ್ರ ನಿರ್ಮಾಣದ ಗುರಿ ಸಾಧಿಸಬಹುದು ಎಂದು ಲೆಕ್ಕಾಚಾರ ಹಾಕಿ ಆನಂತರ ಒಂದೊಂದಾಗಿ ಇಂಥ ವಿವಾದಗಳ ಸುತ್ತ ತನ್ನ ಕವಾಯತು ಆರಂಭಿಸಿತು. ಅಲ್ಲಿಯವರಗೆ ಟಿಪ್ಪು ನೆನಪು ಅದಕ್ಕಿರಲಿಲ್ಲ.

ನಾವು ಚಿಕ್ಕವರಿದ್ದಾಗ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಜೊತೆಗೆ ಟಿಪ್ಪು ಕತೆಗಳನ್ನು ಕೇಳುತ್ತಲೇ ಬೆಳೆದವರು. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪಾಠ ಆಗಲೂ ಇತ್ತು. ಅರವತ್ತರ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಆ ಕಾಲದ ಹೆಸರಾಂತ ನಾಟಕಕಾರ ಹುಲಿಮನೆ ಸೀತಾರಾಮ ಶಾಸ್ತ್ರೀಗಳು ತಮ್ಮ ನಾಟಕ ಕಂಪೆನಿಯಲ್ಲಿ ಪ್ರದರ್ಶಿಸುತ್ತಿದ್ದ ‘ಮೈಸೂರು ಹುಲಿ ಟಿಪ್ಪು ಸುಲ್ತಾನ್’ ನಾಟಕ ಆ ಕಾಲದಲ್ಲಿ ತುಂಬಾ ಜನಪ್ರಿಯವಾಗಿತ್ತು. ಅಷ್ಟೇ ಅಲ್ಲ, ಸಂಘಪರಿವಾರದ ಪ್ರಕಾಶನ ಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್ ಮಕ್ಕಳಿಗಾಗಿ ಪ್ರಕಟಿಸಿದ ಭಾರತ?ಭಾರತಿ ಪುಸ್ತಕ ಮಾಲಿಕೆಯಲ್ಲಿ ಟಿಪ್ಪು ಸುಲ್ತಾನ್ ಪುಸ್ತಕ ಪ್ರಕಟಿಸಿತ್ತು. ಆದರೆ, ನಂತರ ಅದನ್ನು ಮರು ಮುದ್ರಣ ಮಾಡಲಿಲ್ಲ. ಕಾರಣ ಅದರ ಹಿಡನ್ ಅಜೆಂಡಾ ಜಾರಿಗೆ ಈ ಪುಸ್ತಕ ಅಡ್ಡಿಯಾಗಿತ್ತು.

ಇನ್ನು ಟಿಪ್ಪು ಬಗ್ಗೆ ಪರ ಮತ್ತು ವಿರೋಧವಾದ ಸಾಹಿತ್ಯ ಬೇಕಾದಷ್ಟಿದೆ. ಬ್ರಿಟಿಷ್ ಇತಿಹಾಸಕಾರರು ಸಹಜವಾಗಿ ಟಿಪ್ಪುವನ್ನು ಖಳ ನಾಯಕನನ್ನಾಗಿ ಚಿತ್ರಿಸಿದ್ದಾರೆ. ಆದರೆ ನಮ್ಮ ನೆಲದ, ನಮ್ಮ ನಾಡಿನ ಹಿಂದಿನ ತಲೆಮಾರಿನ ಹೆಸರಾಂತ ಲೇಖಕರು, ಸಾಹಿತಿಗಳು ಟಿಪ್ಪುವಿನ ಬಗ್ಗೆ ವಸ್ತು ನಿಷ್ಠವಾಗಿ ಬರೆದಿದ್ದಾರೆ. ಆ ಕಾಲದ ಜಾನಪದ ಸಾಹಿತ್ಯದಲ್ಲೂ ಟಿಪ್ಪುವಿನ ತ್ಯಾಗ ಬಲಿದಾನಗಳ ಕತೆ ದಾಖಲಾಗಿದೆ. ಜನರ ಬಾಯಿಯಲ್ಲಿ ಹರಿದಾಡುವ ಹಾಡುಗಳಲ್ಲಿ ಟಿಪ್ಪು ಹೀರೊ ಆಗಿದ್ದಾನೆ. ಎಡಪಂಥೀಯ ಲೇಖಕರಾದ ಸಿ.ರಾಜೇಶ್ವರರಾವ, ಸಾಕೇತ ರಾಜನ್ ಕೂಡ ಟಿಪ್ಪು ಬಗ್ಗೆ ಬರೆದಿದ್ದಾರೆ. ನಾನು ಓದಿದ ಪುಸ್ತಕಗಳಲ್ಲಿ ಕರ್ನಾಟಕದ ಹಿರಿಯ ಚೇತನ, ಹೆಸರಾಂತ ಪತ್ರಕರ್ತ ತಿರುಮಲೆ ತಾತಾಚಾರ್ಯ ಶರ್ಮಾ ಅವರು ಬರೆದ ‘ಮೈಸೂರು ಇತಿಹಾಸದ ಪುಟಗಳು’ ಪುಸ್ತಕ ಟಿಪ್ಪುವಿನ ನಿಜ ಚರಿತ್ರೆಯನ್ನು ಅನಾವರಣಗೊಳಿಸುತ್ತದೆ.

 ಟಿಪ್ಪು ಸುಲ್ತಾನ್, ಹೈದರ್ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಮೂವರು ರಾಜರ ಬಗ್ಗೆ ಬ್ರಿಟಿಷ್ ಇತಿಹಾಸಕಾರರು ಹೇಳಿದ ಸುಳ್ಳುಗಳನ್ನು ಶರ್ಮಾ ಅವರು ಬಯಲಿಗೆಳೆದಿದ್ದಾರೆ. ಈ ಮೂವರ ಬಗ್ಗೆ ಬ್ರಿಟಿಷ್ ಇತಿಹಾಸಕಾರರು ಸತ್ಯವನ್ನು ಮುಚ್ಚಿಟ್ಟು ಬರೆದರು. ಬ್ರಿಟಿಷರು ಭಾರತವನ್ನು ಕಬಳಿಸಲು ಹೊರಟಿದ್ದನ್ನು ಹೈದರ್ ಮತ್ತು ಟಿಪ್ಪು ಸುಲ್ತಾನ್ ಮೊದಲು ಗುರುತಿಸಿ ವಿರೋಧಿಸಿದರು. ಅದಕ್ಕೆ ಅವಕಾಶ ನೀಡಬಾರದೆಂದು ಛಲದಿಂದ ಹೋರಾಡಿದರು. ಕೆಲ ಮಟ್ಟಿಗೆ ಯಶಸ್ಸನ್ನೂ ಗಳಿಸಿದರು. ಈ ಹೋರಾಟ ನಡೆದಾಗಲೇ ಹೈದರ್ ಅಕಾಲಿಕವಾಗಿ ಸಾವಿಗೀಡಾದ. ಟಿಪ್ಪು ರಣರಂಗದಲ್ಲಿ ಹೋರಾಡುತ್ತಲೇ ಕೊನೆಯುಸಿರೆಳೆದ.ಅವನ ಆಸ್ಥಾನದಲ್ಲಿದ್ದ ಪೂರ್ಣಯ್ಯ, ಮೀರ್ ಸಾಧಕ ಮುಂತಾದವರು ಬ್ರಿಟಿಷರ ಜೊತೆ ಶಾಮೀಲಾಗಿ ಅವನಿಗೆ ದ್ರೋಹ ಬಗೆದರು. ಇದನ್ನು ತಿ.ತಾ.ಶರ್ಮಾ ಅವರು ಸಾಕಷ್ಟು ಮಾಹಿತಿ ಸಂಗ್ರಹಿಸಿ ದಾಖಲಿಸಿದ್ದಾರೆ. ಆಗಿನ ಭಾರತದ ಉಳಿದ ರಾಜ, ಮಹಾರಾಜರು ಪತ್ನಿಯರೊಂದಿಗೆ, ಉಪಪತ್ನಿಯರೊಂದಿಗೆ ಪಾನ ಮತ್ತರಾಗಿ ಲೀಲಾವಿಲಾಸದಲ್ಲಿ ತೊಡಗಿದ್ದರೆ ಹೈದರ್ ಮತ್ತು ಟಿಪ್ಪು ಬ್ರಿಟಿಷರನ್ನು ಎದುರಿಸಲು 17ನೇ ಶತಮಾನದಲ್ಲೇ ತಮ್ಮದೇ ನೌಕಾ ಪಡೆಯನ್ನು ಕಟ್ಟಿದರು. ಹೈದರ ನಂತರ ಟಿಪ್ಪು ಸುಲ್ತಾನ್ ನೆಪೊಲಿಯನ್ ಜೊತೆಗೆ ಪತ್ರವ್ಯವಹಾರ ಮಾಡಿ ಆತನ ನೆರವನ್ನು ಪಡೆದು ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ತಂತ್ರ ರೂಪಿಸಿದನು.

ಟಿಪ್ಪು ಮತಾಂಧ ಎಂದು ಬ್ರಿಟಿಷ್ ಇತಿಹಾಸ ಕಾರರು ಹಿಯಾಳಿಸಿದ್ದನ್ನೇ ಅಮೃತವೆಂದು ಸ್ವೀಕರಿಸಿ ಪಠ್ಯಪುಸ್ತಕಗಳಲ್ಲಿ ಟಿಪ್ಪು, ಹೈದರ್ ಅಳಿಸಿ ಹಾಕಲು ಹೊರಟವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಪುಣೆಯ ಪೇಶ್ವೆಗಳು ಶೃಂಗೇರಿ ಮಠದಿಂದ ಆ ಕಾಲದಲ್ಲಿ 6ಂ ಲಕ್ಷ ರೂ. ಲೂಟಿ ಮಾಡಿಕೊಂಡು ಹೋದಾಗ ಟಿಪ್ಪು ನೆರವಿಗೆ ಬಂದರು. ಇದರ ಕುರಿತು ಟಿಪ್ಪು ಮತ್ತು ಹೈದರ್ ಬರೆದ ಪತ್ರಗಳು ಶೃಂಗೇರಿ ಮಠದಲ್ಲಿರುವ ಬಗ್ಗೆ ಶರ್ಮಾ ಉಲ್ಲೇಖಿಸಿದ್ದಾರೆ.

ಟಿಪ್ಪು ಸುಲ್ತಾನ್ ವಿನಯಶೀಲನಾಗಿದ್ದ, ಪುಸ್ತಕ ಪ್ರೇಮಿಯಾಗಿದ್ದ. ಶ್ರೀರಂಗಪಟ್ಟಣದಲ್ಲಿ ಅವನ ಅರಮನೆ ಯಲ್ಲಿ ಅತ್ಯುತ್ತಮ ವಾದ ಗ್ರಂಥ ಭಂಡಾರವಿತ್ತು. ಟಿಪ್ಪು ತನ್ನ ಸಮಕಾಲೀನ ಅರಸರಿಗೆ ಬರೆದ ಪತ್ರಗಳ ರಾಶಿಯೇ ಇತ್ತು. ಆದರೆ, ಟಿಪ್ಪು ಪತನದ ನಂತರ ಬ್ರಿಟಿಷರು ಅದನ್ನು ಲಂಡನ್‌ಗೆ ಕೊಂಡೊಯ್ದರು. ನಮ್ಮ ಸರಕಾರ ಅದನ್ನು ವಾಪಸು ತರುವ ಪ್ರಯತ್ನ ಮಾಡಲಿಲ್ಲ. ಈಗಂತೂ ಹಿಂದೆ ಬ್ರಿಟಿಷರ ಪಾದ ಸೇವೆ ಮಾಡಿದವರು ಅಧಿಕಾರದಲ್ಲಿದ್ದಾರೆ. ಟಿಪ್ಪು ಹೆಸರನ್ನೇ ಅಳಿಸಿ ಹಾಕಲು ಹೊರಟಿದ್ದಾರೆ.

ಆ ಕಾಲದ ಉಳಿದ ರಾಜ, ಮಹಾರಾಜರಂತೆ ಟಿಪ್ಪು ಬ್ರಿಟಿಷ್ ಆಳರಸರೊಂದಿಗೆ ರಾಜಿ ಮಾಡಿಕೊಂಡಿದ್ದರೆ, ಚಮಚಾಗಿರಿ ಮಾಡಿದ್ದರೆ ಅವನ ಅರಸೊತ್ತಿಗೆ ಅಬಾಧಿತವಾಗಿರುತ್ತಿತ್ತು. ಆದರೆ, ಸ್ವಾಭಿಮಾನಿ ಟಿಪ್ಪು ಆಂಗ್ಲರಿಗೆ ಶರಣಾಗಲಿಲ್ಲ. ಅಂತಲೇ ಬ್ರಿಟಿಷರು ಪುಣೆಯ ಪೇಶ್ವೆಗಳನ್ನು , ಹೈದರಾಬಾದ್ ನಿಜಾಮನನ್ನು ಟಿಪ್ಪು ವಿರುದ್ಧ ಎತ್ತಿ ಕಟ್ಟಿದರು. ಹಿಂದು? ಮುಸ್ಲಿಂ ಪ್ರಶ್ನೆ ಆಗ ಇರಲಿಲ್ಲ. ಅಂತಲೆ ಮುಸ್ಲಿಂ ನಿಜಾಮ್, ಮರಾಠಾ ಸಾಮ್ರಾಜ್ಯದ ಬ್ರಾಹ್ಮಣ ಪೇಶ್ವೆ ಒಂದಾಗಿ ಟಿಪ್ಪುವನ್ನು ಹಣಿಯಲು ಮುಂದಾದರು. ಇದನ್ನು ತಿಳಿದುಕೊಳ್ಳದ, ತಿಳಿದರೂ ತಮ್ಮ ಫ್ಯಾಸಿಸ್ಟ್ ಅಜೆಂಡಾ ಜಾರಿಗಾಗಿ ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಗೊಳ್ವಲಕರವಾದಿಗಳು ಚಿತ್ರಿಸುತ್ತಿದ್ದಾರೆ. ಪುಸ್ತಕ ಓದದ ಅನೇಕ ಯುವಕರು ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ಸುಳ್ಳು ಕತೆಗಳನ್ನು ಓದಿ ಟಿಪ್ಪು, ಗಾಂಧಿ, ನೆಹರು ವಿರುದ್ಧ ಸುಖಾ ಸುಮ್ಮನೆ ಬೈಯುತ್ತ ಅಪಪ್ರಚಾರ ಮಾಡುತ್ತಾರೆ.

 ಟಿಪ್ಪು ಅಧಿಕಾರ ವಹಿಸಿಕೊಂಡ ನಂತರ ಬರೀ ಯುದ್ಧ ಗಳನ್ನೇ ಎದುರಿಸಬೇಕಾಯಿತು. ಅಂಥ ಪರಿಸ್ಥಿತಿಯಲ್ಲೂ ಅಭಿವೃದ್ಧಿ ಕಾರ್ಯವನ್ನು ಆತ ಕಡೆಗಣಿಸಲಿಲ್ಲ. ಭೂರಹಿತ ದಲಿತರಿಗೆ ಭೂಮಿ ಹಂಚಿದ. ಇದಕ್ಕಾಗಿಯೇ ಪಟ್ಟಭದ್ರ ಹಿತಾಸಕ್ತಿಗಳು ಆತನ ವಿರುದ್ಧ ಕೋಪ ಗೊಂಡವು. ಮೈಸೂರಿಗೆ ರೇಷ್ಮೆಯನ್ನು ಪರಿಚಯಿಸಿದ, ರೈತರಿಗೆ ನೀರಾವರಿಗೆ ಅನುಕೂಲ ಮಾಡಲು ಕನ್ನಂಬಾಡಿ ಬಳಿ ಅಣೆಕಟ್ಟು ನಿರ್ಮಾಣದ ಯೋಜನೆ ರೂಪಿಸಿದ. ಆದರೆ, ಆತನ ಈ ಕನಸು ನನಸಾಗುವ ಮೊದಲೇ ರಣರಂಗದಲ್ಲಿ ಕೊನೆಯುಸಿರೆಳೆದ. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟು ನಿರ್ಮಾಣ ಕಾರ್ಯ ಕೈಗೊಂಡು ಪೂರ್ಣಗೊಳಿಸಿದರು.

ಟಿಪ್ಪುವಿನ ಬಗ್ಗೆ ಹೇಳಲು ಹೊರಟಾಗ ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ತನ್ನ ಅರಸೊತ್ತಿಗಾಗಿ ಹೋರಾಡಿದ ಎಂದು ಕೆಲವರು ವಾದಿಸುತ್ತಾರೆ. ಆಗ ಭಾರತ ಒಂದು ದೇಶವೇ ಆಗಿರಲಿಲ್ಲ ಎಂದು ಹೇಳುತ್ತಾರೆ. ನಿಜ ಈ ವಾದ ಒಪ್ಪಿದರೆ, ಕಿತ್ತೂರು ಚೆನ್ನಮ್ಮ , ರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ ಇವರೂ ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಹೇಳಬೇಕಾಗುತ್ತದೆ. ಆದರೆ, ಅವರು ತಮ್ಮ ಅರಸೊತ್ತಿಗೆಯ ಹಿತಾಸಕ್ತಿಗಾಗಿ ಹೋರಾಟ ಮಾಡಿದ್ದರೂ ಅದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಮೊದಲ ಬಂಡಾಯದ ಕಿಡಿ ಎಂದು ಒಪ್ಪಲೇಬೇಕಾಗುತ್ತದೆ.

ಟಿಪ್ಪು ಸುಲ್ತಾನ್ ರಣರಂಗದಲ್ಲಿ ಮಡಿದು 200 ವರ್ಷಗಳ ನಂತರ ಪಠ್ಯದಲ್ಲಿ ಅವನ ಇತಿಹಾಸ ಅಳಿಸಿಹಾಕಲು ಹೊರಟಿರುವುದು ಅವಿವೇಕದ ಪರಮಾವಧಿ. ಇದನ್ನು ಮಾಡಿದರೆ ಮೈಸೂರು ಇತಿಹಾಸದ 1850 ರಿಂದ 1800 ವರ್ಷಗಳ ಚರಿತ್ರೆಯನ್ನೇ ಮರೆ ಮಾಚಿದಂತಾಗುತ್ತದೆ. ಪಠ್ಯದಲ್ಲಿ ಔರಂಗಜೇಬ್, ಬಾಬರ್, ಅಕ್ಬರ್, ಕಿತ್ತೂರು ಚೆನ್ನಮ್ಮ, ಗೋಡ್ಸೆ, ಸಾವರ್ಕರ್ ಬಗ್ಗೆ ಎಲ್ಲವನ್ನೂ ಅಳವಡಿಸಲಾಗಿದೆ. ಇವರಲ್ಲಿ ಒಳ್ಳೆಯವರೂ ಇದ್ದಾರೆ. ಕೆಟ್ಟವರೂ ಇದ್ದಾರೆ. ಇತಿಹಾಸದ ಪಠ್ಯದಲ್ಲಿ ಒಳ್ಳೆಯದು ಮಾತ್ರವಿರಬೇಕು. ಕೆಟ್ಟವರ ಬಗ್ಗೆ ಇರಬಾರದು ಎಂಬುದು ಅವಿವೇಕಿಗಳ ಮೊಂಡುವಾದವಾಗಿದೆ.

ಟಿಪ್ಪು ಇತಿಹಾಸವನ್ನು ಬಿಜೆಪಿ ಸರಕಾರ ಪಠ್ಯದಿಂದ ತೆಗೆದು ಹಾಕಿದ ಮಾತ್ರಕ್ಕೆ ಇತಿಹಾಸ ಸುಳ್ಳಾಗುವುದಿಲ್ಲ. ಅಧಿಕಾರದಲ್ಲಿ ಇರುವವರಿಗೆ ವಿವೇಕ ಇರದಿದ್ದರೆ, ಜನಾಂಗ ದ್ವೇಷಿ ಫ್ಯಾಸಿಸ್ಟ್ ಸಂಘಟನೆ ಯೊಂದು ಚುನಾಯಿತ ಸರಕಾರವನ್ನು ತೆರೆಮರೆಯಲ್ಲಿ ನಿಂತು ನಿಯಂತ್ರಿಸುತ್ತಿದ್ದರೆ ಇಂಥ ಅವಾಂತರಗಳಾಗುತ್ತವೆ. ದೇಶ ಎದುರಿಸುತ್ತಿರುವ ಪ್ರಸಕ್ತ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಚರಿತ್ರೆಯ ಗೋರಿಯನ್ನು ಹೀಗೆ ಅಗೆಯುತ್ತ ಹೋದರೆ, ಅದಕ್ಕೆ ಕೊನೆ ಎಂಬುದಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ