ಚಿದಂಬರಂ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನೇ ಡಿಕೆಶಿ ವಿರುದ್ಧ ಕಾಪಿ ಪೇಸ್ಟ್ ಮಾಡಿದ ಇಡಿ !

Update: 2019-11-15 07:11 GMT

ಹೊಸದಿಲ್ಲಿ, ನ. 15 : ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಿರುವ ದಿಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಲೇರಿರುವ ಜಾರಿ ನಿರ್ದೇಶನಾಲಯಕ್ಕೆ ಹಾಗು ಕೇಂದ್ರ ಸರಕಾರಕ್ಕೆ ಶುಕ್ರವಾರ ಭಾರೀ ಮುಖಭಂಗವಾಗಿದೆ. 

ಇಡಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಆರ್ ಎಫ್ ನಾರಿಮನ್ ಅವರು ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. "ಶಬರಿಮಲೆ ವಿಷಯದಲ್ಲಿ ನಾವು ನೀಡಿರುವ ಭಿನ್ನಾಭಿಪ್ರಾಯದ ತೀರ್ಪನ್ನು ಸರಿಯಾಗಿ ಓದಿ. ನಮ್ಮ ಆದೇಶಗಳ ಜೊತೆ ಆಟವಾಡಬೇಡಿ. ನಮ್ಮ ತೀರ್ಪುಗಳು ಬದಲಾಗದು ಎಂದು ನಿಮ್ಮ ಸರಕಾರಕ್ಕೆ ಹೇಳಿ" ಎಂದು ನ್ಯಾ. ನಾರಿಮನ್ ಅವರು ಮೆಹ್ತಾ ಅವರಿಗೆ ಹೇಳಿದ್ದಾರೆ. 

ನ್ಯಾ ರವೀಂದ್ರ ಭಟ್ ಅವರು ಇದ್ದ ಈ ಪೀಠ, ಡಿಕೆಶಿಗೆ ಜಾಮೀನು ನೀಡಿರುವುದರ ವಿರುದ್ಧದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಪ್ರಾರಂಭದಿಂದಲೇ ನಿರಾಸಕ್ತಿ ತೋರಿಸಿತು. ಈ ಸಂದರ್ಭದಲ್ಲಿ ಮನವಿಯಲ್ಲಿ ಜಾರಿ ನಿರ್ದೇಶನಾಲಯ ಈ ಹಿಂದೆ ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪಿ ಚಿದಂಬರಂ ಅವರ ಜಾಮೀನು ವಿರೋಧಿಸಿ ತಾನು ನೀಡಿದ್ದ ಮನವಿಯ ಭಾಗಗಳನ್ನೇ ಕಾಪಿ ಪೇಸ್ಟ್ ಮಾಡಿ ಡಿಕೆಶಿ ವಿರುದ್ಧ ಮನವಿ ಸಲ್ಲಿಸಿದೆ ಎಂಬ ಅಂಶವನ್ನು ಎತ್ತಿ ತೋರಿಸಿದರು. ಅದರಲ್ಲಿ ಒಂದು ಕಡೆ ಡಿಕೆಶಿಯನ್ನು ಮಾಜಿ ಗೃಹ ಸಚಿವ ಎಂದು ಹೇಳಲಾಗಿದೆ. ಆದರೆ ಕೇಂದ್ರದ ಮಾಜಿ ಗೃಹ ಸಚಿವ ಪಿ. ಚಿದಂಬರಂ. 

"ಇದು ನಾಗರೀಕರನ್ನು ನಡೆಸಿಕೊಳ್ಳುವ ವಿಧಾನ ಅಲ್ಲ" ಎಂದು ನ್ಯಾ. ನಾರಿಮನ್ ಈ ಸಂದರ್ಭದಲ್ಲಿ ತುಷಾರ್ ಮೆಹ್ತಾ ಅವರನ್ನು ತರಾಟೆಗೆ ತೆಗೆದುಕೊಂಡರು. ಮನವಿಯನ್ನು ತಿರಸ್ಕರಿಸಬೇಡಿ ಎಂದು ತುಷಾರ್ ಮೆಹ್ತಾ ಅವರು ಮತ್ತೆ ಮತ್ತೆ ಮನವಿ ಮಾಡಿದಾಗ ನ್ಯಾ. ನಾರಿಮನ್ ಅವರು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪಾಲಿಸುವ ಬಗ್ಗೆ ಅವರಿಗೆ ಪಾಠ ಹೇಳಿದರು. 

ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪಾಲಿಸುವುದು ಕಡ್ಡಾಯ ಎಂದು ತಾವು ಶಬರಿಮಲೆ ಪ್ರಕರಣದಲ್ಲಿ ನೀಡಿರುವ ಭಿನ್ನಾಭಿಪ್ರಾಯದ ತೀರ್ಪಿನಲ್ಲಿ ಹೇಳಿರುವ ಬಗ್ಗೆ  ಕೇಂದ್ರ ಸರಕಾರಕ್ಕೆತಿಳಿಸುವಂತೆ ನ್ಯಾ ನಾರಿಮನ್ ಅವರು ಮೆಹ್ತಾ ಅವರಿಗೆ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News