ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಜಾರಿ: ಅಮಿತ್ ಶಾ

Update: 2019-11-20 16:21 GMT

ಹೊಸದಿಲ್ಲಿ, ನ.20: ಅಸ್ಸಾಂನಲ್ಲಿ ನಡೆಸಿರುವಂತೆಯೇ ಪೌರತ್ವ ಪಟ್ಟಿ ಅಥವಾ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಪ್ರಕ್ರಿಯೆಯನ್ನು ದೇಶಾದ್ಯಂತ ನಡೆಸಲಾಗುವುದು . ಈ ಬಗ್ಗೆ ಯಾವುದೇ ಧರ್ಮದವರೂ ಆತಂಕ ಪಡಬೇಕಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಘೋಷಿಸಿದ್ದಾರೆ.

ಎನ್‌ಆರ್‌ಸಿ ಪ್ರತಿಯೊಬ್ಬರನ್ನೂ ಪೌರತ್ವ ಪಟ್ಟಿಯಲ್ಲಿ ಸೇರಿಸುವ ಒಂದು ಪ್ರಕ್ರಿಯೆ ಅಷ್ಟೇ. ಇದನ್ನು ದೇಶಾದ್ಯಂತ ನಡೆಸಲಾಗುತ್ತದೆ. ಈ ಬಗ್ಗೆ ಯಾರೂ ಭಯಪಡುವ ಅಗತ್ಯವೇ ಇಲ್ಲ ಎಂದು ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿದ್ದಾರೆ. ಅಸ್ಸಾಂನ ಪೌರತ್ವ ಪಟ್ಟಿಯಲ್ಲಿ ಹೆಸರು ಕಾಣೆಯಾಗಿರುವವರು ನ್ಯಾಯಮಂಡಳಿಯನ್ನು ಸಂಪರ್ಕಿಸಬಹುದು ಮತ್ತು ಅಸ್ಸಾಂ ಸರಕಾರ ಇವರಿಗೆ ಆರ್ಥಿಕ ನೆರವನ್ನೂ ಒದಗಿಸುತ್ತದೆ ಎಂದವರು ಹೇಳಿದ್ದಾರೆ.

ಅಸ್ಸಾಂನಲ್ಲಿ ಎನ್‌ಆರ್‌ಸಿ ಅಂತಿಮ ಪಟ್ಟಿಯಿಂದ 19 ಲಕ್ಷ ಜನರ ಹೆಸರನ್ನು ಕೈಬಿಡಲಾಗಿದೆ. ಪೌರತ್ವ ಸಾಬೀತುಪಡಿಸುವ ದಾಖಲೆಯನ್ನು ಇವರು ಒದಗಿಸಿಲ್ಲ. ಆದರೆ ಅವರನ್ನು ಈಗಲೇ ಅಕ್ರಮ ನಿವಾಸಿಗಳೆಂದು ಘೋಷಿಸುವುದಿಲ್ಲ. ವಿದೇಶಿಯರ ನ್ಯಾಯಮಂಡಳಿಯನ್ನು ಹಾಗೂ ಬಳಿಕ ನ್ಯಾಯಾಲಯವನ್ನು ಸಂಪರ್ಕಿಸುವ ಆಯ್ಕೆ ಅವರಿಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  ಈ ಹಿಂದೆ ಕೋಲ್ಕತಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಅಮಿತ್ ಶಾ, ಎನ್‌ಆರ್‌ಸಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ. ಇಷ್ಟೊಂದು ಅಕ್ರಮ ಪ್ರವಾಸಿಗರ ಭಾರದಡಿ ಯಾವ ದೇಶವೂ ಸುಗಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದು . ಆದರೆ ಯಾರನ್ನೂ ಭಾರತ ಬಿಟ್ಟು ತೆರಳುವಂತೆ ಸರಕಾರ ಬಲವಂತ ಮಾಡುವುದಿಲ್ಲ ಎಂದು ಹಿಂದು, ಸಿಖ್, ಜೈನ್, ಬೌದ್ಧರು ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಭರವಸೆ ನೀಡುತ್ತಿದ್ದೇನೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News