ಮಹಾರಾಷ್ಟ್ರದ ಮಧ್ಯರಾತ್ರಿಯ ಸರ್ಜಿಕಲ್ ಸ್ಟ್ರೈಕ್

Update: 2019-11-24 18:33 GMT

ಮಹಾರಾಷ್ಟ್ರದ ಬೆಳವಣಿಗೆಯಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಯಾರು ಎಷ್ಟೇ ಭ್ರಷ್ಟಾಚಾರ ಮಾಡಲಿ, ಕೋಟಿ ಕೋಟಿ ನುಂಗಲಿ, ಬಿಜೆಪಿ ಜೊತೆ ಸೇರಿದರೆ ‘‘ಬಾರಾ ಖೂನ್ ಮಾಫ್’’ ಹೀಗೆ ಸಾವಿರಾರು ಕೋಟಿ ರೂಪಾಯಿಗಳ ಎರಡು ಭಾರೀ ಹಗರಣಗಳಲ್ಲಿ ಜೈಲಿಗೆ ಹೋಗಬೇಕಾಗಿದ್ದ ಅಜಿತ್ ಪವಾರ್ ಮೇಲೆ ಗಂಗಾಜಲ ಪ್ರೋಕ್ಷಣೆ ಮಾಡಿದ ಬಿಜೆಪಿ ಅವರನ್ನು ದೋಷಮುಕ್ತಗೊಳಿಸಿದೆ. ಇದು ದೇಶದ ಇಂದಿನ ಸ್ಥಿತಿ.


ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಅಚ್ಚರಿಯುಂಟು ಮಾಡಿಲ್ಲ. ಆದರೆ ದೇಶದ ಪ್ರಜಾಪ್ರಭುತ್ವದ ಬಗ್ಗೆ ಸಾಂವಿಧಾನಿಕ ಆಡಳಿತ ವ್ಯವಸ್ಥೆಯ ಭವಿಷ್ಯದ ಬಗ್ಗೆ ಆತಂಕವನ್ನುಂಟು ಮಾಡಿದೆ. ಆ ರಾಜ್ಯದಲ್ಲಿ ಶಿವಸೇನೆ, ರಾಷ್ಟ್ರ ವಾದಿ ಕಾಂಗ್ರೆಸ್ (ಎನ್‌ಸಿಪಿ) ಮೈತ್ರಿ ಕೂಟದ ಸರಕಾರ ಅಸ್ತಿತ್ವಕ್ಕೆ ಬರುತ್ತದೆಂದು ಎಲ್ಲರೂ ಭಾವಿಸಿದ್ದರು. ಶನಿವಾರದ ಬೆಳಗ್ಗಿನ ಪತ್ರಿಕೆಗಳಲ್ಲೂ ಇದೇ ಸುದ್ದಿ ಪ್ರಕಟವಾಗಿತ್ತು. ಆದರೆ ಈ ಸುದ್ದಿ ಶುಕ್ರವಾರ ಮಧ್ಯರಾತ್ರಿಯೇ ಸತ್ತು ಹೋಗಿತ್ತು. ನಡುರಾತ್ರಿ ನಡೆದ ಕಾರ್ಯಾಚರಣೆ ಎಲ್ಲವನ್ನೂ ತಲೆ ಕೆಳಗು ಮಾಡಿತು. ಬೆಳಗಾಗುವುದರಲ್ಲಿ ಬಿಜೆಪಿ_ ಮತ್ತು ಶರದ್ ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ (ಎನ್‌ಸಿಪಿ)ಗಳು ಅನೈತಿಕ ಮೈತ್ರಿ ಮಾಡಿಕೊಂಡು ಸರಕಾರ ರಚನೆಗೆ ತೀರ್ಮಾನಿಸಿದವು. ಇದರಲ್ಲಿ ಸ್ಥಳೀಯ ಹೊಂದಾಣಿಕೆಗಿಂತ ದಿಲ್ಲಿ ಮಟ್ಟದ ತೆರೆ ಮರೆಯ ಹಸ್ತಕ್ಷೇಪ ಎದ್ದು ಕಾಣುತ್ತದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಅಜಿತ್ ಪವಾರ್ ಅವರ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಹಗರಣವನ್ನು ಬಯಲಿಗೆಳೆದು ಆತನನ್ನು ಜೈಲಿಗೆ ಕಳಿಸುವುದಾಗಿ ಒಂದಲ್ಲ ಎರಡಲ್ಲ ಹಲವಾರು ಬಹಿರಂಗ ಸಭೆಗಳಲ್ಲಿ ಹೇಳಿದ್ದರು. ಆದರೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಸಮಾನ ಮನಸ್ಕ ಪಕ್ಷಗಳಾದ ಶಿವಸೇನೆ ಮತ್ತು ಬಿಜೆಪಿ ಜೊತೆ ಸೇರಿ ಸರಕಾರ ರಚನೆ ಮಾಡಬಹುದಾಗಿತ್ತು. ಆದರೆ ಬಿಜೆಪಿಯ ಅನಿವಾರ್ಯತೆ ಮತ್ತು ಅಸಹಾಯಕತೆಯನ್ನು ಬಳಸಿಕೊಂಡ ಶಿವಸೇನೆ ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆಗೆ ನೀಡಿದರೆ ಮಾತ್ರ ಬೆಂಬಲ ನೀಡುವುದಾಗಿ ಶರತ್ತು ಹಾಕಿತು. ಇದಕ್ಕೆ ಬಿಜೆಪಿ ಒಪ್ಪಿಕೊಳ್ಳಲಿಲ್ಲ.

ಇಂಥ ಸನ್ನಿವೇಶ ಬಳಸಿಕೊಂಡು ಕಾಂಗ್ರೆಸ್, ಎನ್‌ಸಿಪಿಗಳು ಕೋಮುವಾದಿ ಶಿವಸೇನೆಯ ಜೊತೆ ಸೇರಿ ಸರಕಾರ ರಚನೆಗೆ ಮುಂದಾದವು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಸರಕಾರ ರಚನೆಯಾಗುತ್ತಿತ್ತು. ಆದರೆ ಇಂಥ ಸರಕಾರವೊಂದು ಮಹಾರಾಷ್ಟ್ರ ದಲ್ಲಿ ಅಸ್ತಿತ್ವಕ್ಕೆ ಬರುವುದು ಬಿಜೆಪಿಯ ರಾಷ್ಟ್ರೀಯ ನಾಯಕತ್ವಕ್ಕೆ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್‌ಶಾಗೆ ಬೇಕಾಗಿರಲಿಲ್ಲ. ಪ್ರತಿಪಕ್ಷ ಮುಕ್ತ ಭಾರತವನ್ನು ನಿರ್ಮಿಸಲು ಹೊರಟಿರುವ ಅವರಿಗೆ ಇದನ್ನು ಸಹಿಸಲಾಗಲಿಲ್ಲ. ಆಗ ಬಳಕೆಯಾಗಿದ್ದು ಬ್ಲಾಕ್‌ಮೇಲ್ ಎಂಬ ಬ್ರಹ್ಮಾಸ್ತ್ರ. ಶರದ್ ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಹಲವಾರು ಹಗರಣಗಳಲ್ಲಿ ಸಿಲುಕಿದೆ. ನೇರವಾಗಿ ಶರದ್ ಪವಾರ್ ಕೈವಾಡವಿಲ್ಲದಿದ್ದರೂ ಅವರ ಸೋದರನ ಮಗ ಅಜಿತ್ ಪವಾರ್ ಎಲ್ಲ ಹಗರಣಗಳ ಖಳನಾಯಕ. ಸುಮಾರು ಎಪ್ಪತ್ತಾರು ಸಾವಿರ ಕೋಟಿ ರೂಪಾಯಿಗಳ ಭಾರೀ ನೀರಾವರಿ ಹಗರಣದಲ್ಲಿ ಅವರು ಕೈ ಹೊಲಸು ಮಾಡಿಕೊಂಡಿದ್ದಾರೆ. ಇದನ್ನೇ ಬಳಸಿಕೊಂಡ ಬಿಜೆಪಿ ಸಿಬಿಐ ಎಂಬ ಬ್ರಹ್ಮಾಸ್ತ್ರದ ಮೂಲಕ ಡಿ.ಕೆ. ಶಿವಕುಮಾರ್‌ಗೆ ತಂದ ಸ್ಥಿತಿಯನ್ನು ನೆನಪು ಮಾಡಿಕೊಟ್ಟಿತು. ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಶರದ್ ಪವಾರ್ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದರು. ಮರುದಿನದ ಪತ್ರಿಕೆಯಲ್ಲಿ ಇದು ಸೌಹಾರ್ದ ಭೇಟಿ ಎಂದು ವರದಿಯಾಗಿತ್ತಾದರೂ ಅದರ ಗುಟ್ಟು ಈಗ ಹೊರಬಿದ್ದಿದೆ.

ಮಹಾರಾಷ್ಟ್ರ ದಲ್ಲಿ ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ ಮೈತ್ರಿ ಸರಕಾರದ ರಚನೆಗೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಆದರೆ ಶುಕ್ರವಾರ ರಾತ್ರಿ 11:_45 ಕ್ಕೆ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ರಹಸ್ಯವಾಗಿ ಭೇಟಿಯಾದರು. 12:30 ಕ್ಕೆ ರಾಷ್ಟ್ರಪತಿ ಆಡಳಿತ ವಾಪಸ್ ಪಡೆಯುವ ಅಧಿಸೂಚನೆ ಹೊರಡಿಸಿ ಬೆಳಗಿನ ಜಾವ 5:45ಕ್ಕೆ ಪ್ರಕಟಿಸುವಂತೆ ತೀರ್ಮಾನಕ್ಕೆ ಬರಲಾಯಿತು. ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಅವರ ಪೂರ್ವ ನಿಗದಿತ ದಿಲ್ಲಿ ಪ್ರಯಾಣವನ್ನು ಮಧ್ಯರಾತ್ರಿ 12:55ಕ್ಕೆ ರದ್ದುಗೊಳಿಸಲು ಸೂಚಿಸಲಾಯಿತು. ಬೆಳಗಿನ ಜಾವ 6:30ಕ್ಕೆ ಅಧಿಕಾರದ ಪ್ರಮಾಣ ವಚನಕ್ಕೆ ಸಮಯ ನಿಗದಿ ಮಾಡಲಾಯಿತು. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಮತ್ತು ಅಜಿತ್ ಪವಾರ್ ಉಪ ಮುಖ್ಯಮಂತ್ರಿ ಎಂದು ತೀರ್ಮಾನಕ್ಕೆ ಬರಲಾಯಿತು. ಇದೆಲ್ಲ ಪ್ರಕ್ರಿಯೆ ಮುಗಿಯುವವರೆಗೆ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಒಬ್ಬರನ್ನೊಬ್ಬರು ಬಿಟ್ಟು ಸರಿಯಲಿಲ್ಲ. ಹೀಗೆ ಮಧ್ಯರಾತ್ರಿಯಲ್ಲಿ ಸರಕಾರವೊಂದು ಅಸ್ತಿತ್ವಕ್ಕೆ ಬಂತು.

ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ನಡುವೆ ನಡೆದ ಗುಟ್ಟಿನ ವ್ಯವಹಾರದ ವಿಷಯ ತನಗೆ ಗೊತ್ತಿಲ್ಲ ಎಂದು ಎನ್‌ಸಿಪಿಯ ಸ್ಥಾಪಕ ಹಿರಿಯ ನಾಯಕ ಶರದ್ ಪವಾರ್ ಬಹಿರಂಗವಾಗಿ ಹೇಳಿದರೂ ಯಾರೂ ನಂಬಲಿಲ್ಲ. ಇದೊಂದು ರೀತಿ 2006 ರಲ್ಲಿ ಕರ್ನಾಟಕದಲ್ಲಿ ಕುಮಾರಸ್ವಾಮಿ ಬಿಜೆಪಿಯ ಜೊತೆ ಸೇರಿ ಸರಕಾರ ರಚನೆ ಮಾಡಿದಾಗ ದೇವೇಗೌಡರು ಆಡಿದ ಆಟ ಎಂದು ಕೆಲ ರಾಜಕೀಯ ವಿಶ್ಲೇಷಣಕಾರರು ವ್ಯಾಖ್ಯಾನಿಸಿದರು. ಆದರೆ ವಾಸ್ತವವಾಗಿ ರಾಷ್ಟ್ರ ವಾದಿ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲೇ ಬಿರುಕುಂಟಾಗಿತ್ತು. ಪಕ್ಷದಲ್ಲಿ ಶರದ್ ಪವಾರ್ ಉತ್ತರಾಧಿಕಾರಿ ಪಟ್ಟಕ್ಕಾಗಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಮತ್ತು ಶರದ್ ಪವಾರ್‌ರ ಅಣ್ಣನ ಮಗ ಅಜಿತ್ ಪವಾರ್ ಅವರಲ್ಲಿ ಪೈಪೋಟಿ ಏರ್ಪಟ್ಟಿತ್ತು. ನಂತರ ಈ ಬಿರುಕು ಅಗಲವಾಗುತ್ತಾ ಹೋಯಿತು.ಇದನ್ನು ಬಿಜೆಪಿ ಬಳಸಿಕೊಂಡಿತು. ಸಾವಿರಾರು ಕೋಟಿ ರೂಪಾಯಿಗಳ ಹಗರಣದಲ್ಲಿ ಸಿಲುಕಿದ್ದ ಅಜಿತ್ ಪವಾರ್‌ರನ್ನು ಬೆದರಿಸಿ, ಸಿಬಿಐ ತನಿಖೆಯ ಬ್ರಹಾಸ್ತ್ರ ತೋರಿಸಿ ಅವರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಒಂದರ್ಥದಲ್ಲಿ ಎನ್‌ಸಿಪಿಯನ್ನು ಒಡೆದು ಇಬ್ಭಾಗ ಮಾಡಿ ಮಧ್ಯರಾತ್ರಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಸರಕಾರ ರಚಿಸಿತು.

ಬಿಜೆಪಿ ಉಳಿದ ಪಕ್ಷಗಳಂಥಲ್ಲ. ತತ್ವ ಸಿದ್ಧಾಂತ ಹೊಂದಿರುವ ಪಕ್ಷ ಅದೇಕೆ ಹೀಗೆ ಮಾಡುತ್ತದೆ ಎಂದು ಅನೇಕರಿಗೆ ಅಚ್ಚರಿಯಾಗಬಹುದು. ನಿಜ, ಅದಕ್ಕೆ ಆರೆಸ್ಸೆಸ್ ಎಂಬ ಮಾತೃ ಸಂಘಟನೆಯ ಹಿಡಿತವಿದೆ. ಅದಕ್ಕೆ ಜಾತ್ಯತೀತ ಜನತಾಂತ್ರಿಕ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ದೂರದ ಗುರಿ ಇದೆ. ಈ ಗುರಿ ಸಾಧನೆಯಾಗಬೇಕಾದರೆ ರಾಜಕೀಯ ಅಧಿಕಾರ ಕೈಯಲ್ಲಿ ಇರಬೇಕು. ಅದಿದ್ದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ಅದಕ್ಕಾಗಿ ಅದು ಇಂಥ ಸಣ್ಣಪುಟ್ಟ ಹೊಂದಾಣಿಕೆ, ರಾಜಿಗಳಿಗೆ ಸಮ್ಮತಿ ನೀಡುತ್ತದೆ. ಸೆಕ್ಯುಲರ್ ಎಂದು ಹೇಳಿಕೊಂಡು ಭ್ರಷ್ಟಾಚಾರ ಮಾಡುವ ಅಧಿಕಾರಕ್ಕೆ ಬಾಯಿ ಬಿಡುವ ಪಕ್ಷಗಳ ಜೊತೆ ಅಧಿಕಾರ ಹಂಚಿಕೊಳ್ಳುತ್ತದೆ. ರಾಜಿಗೆ ತಯಾರಾಗದಿದ್ದರೆ ಲಾಲೂ ಪ್ರಸಾದ್ ಯಾದವ್‌ರಂತೆ ಜೈಲಿಗೆ ಹೋಗಬೇಕಾಗುತ್ತದೆ. ಈ ದೇಶದಲ್ಲಿ ಕಮ್ಯುನಿಸ್ಟರನ್ನು ಬಿಟ್ಟರೆ ಲಾಲು ಪ್ರಸಾದ್ ಯಾದವ್ ಮಾತ್ರ ಕೋಮುವಾದಿ, ಫ್ಯಾಶಿಸ್ಟ್ಟ್ ಶಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳದೆ ಸೆಣಸುತ್ತ ಬಂದಿದ್ದಾರೆ. ಮಹಾರಾಷ್ಟ್ರದ ವಿದ್ಯಮಾನಗಳು ಬರಲಿರುವ ಆತಂಕಕಾರಿ ದಿನಗಳ ಮುನ್ಸೂಚನೆಯಾಗಿವೆ. ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಡಳಿತವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಜನರೇ ಈಗ ಸಂಕಲ್ಪತೊಟ್ಟು ಹೋರಾಡಬೇಕಾಗಿದೆ.

ಮಹಾರಾಷ್ಟ್ರದ ಬೆಳವಣಿಗೆಯಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಯಾರು ಎಷ್ಟೇ ಭ್ರಷ್ಟಾಚಾರ ಮಾಡಲಿ, ಕೋಟಿ ಕೋಟಿ ನುಂಗಲಿ, ಬಿಜೆಪಿ ಜೊತೆ ಸೇರಿದರೆ ‘‘ಬಾರಾ ಖೂನ್ ಮಾಫ್’’ ಹೀಗೆ ಸಾವಿರಾರು ಕೋಟಿ ರೂಪಾಯಿಗಳ ಎರಡು ಭಾರೀ ಹಗರಣಗಳಲ್ಲಿ ಜೈಲಿಗೆ ಹೋಗಬೇಕಾಗಿದ್ದ ಅಜಿತ್ ಪವಾರ್ ಮೇಲೆ ಗಂಗಾಜಲ ಪ್ರೋಕ್ಷಣೆ ಮಾಡಿದ ಬಿಜೆಪಿ ಅವರನ್ನು ದೋಷಮುಕ್ತಗೊಳಿಸಿದೆ. ಇದು ದೇಶದ ಇಂದಿನ ಸ್ಥಿತಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News