ಆರೆಸ್ಸೆಸ್ ಮುಖಂಡ ಇಂದ್ರೇಶ್ ಗೆ ಮೊಯಿನುದ್ದೀನ್ ಚಿಸ್ತಿ ವಿವಿ ಗೌರವ ಡಾಕ್ಟರೇಟ್
ಹೊಸದಿಲ್ಲಿ, ನ. 29: ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರು 2007ರಲ್ಲಿ ಮೂವರನ್ನು ಬಲಿ ತೆಗೆದುಕೊಂಡಿದ್ದ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ 2017ರವರೆಗೂ ಆರೋಪಿಯಾಗಿದ್ದರು. ಈಗ ಅವರು ಅದೇ ದರ್ಗಾದಲ್ಲಿ ಆರಾಧಿಸಲ್ಪಡುತ್ತಿರುವ ಸಂತನ ಹೆಸರು ಹೊಂದಿರುವ ಲಕ್ನೋದ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರ್ದು, ಅರಬಿ- ಫಾರ್ಸಿ ವಿಶ್ವವಿದ್ಯಾನಿಲಯದಿಂದ ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ.
ಅಜ್ಮೀರ್ ನಲ್ಲಿರುವ 13ನೇ ಶತಮಾನದ ಬೋಧಕ ಮತ್ತು ವಿದ್ವಾಂಸ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾ 12 ವರ್ಷಗಳ ಹಿಂದೆ ನಡೆದಿದ್ದ ಸ್ಫೋಟದ ಗುರಿಯಾಗಿತ್ತು.
ನ.21ರಂದು ನಡೆದ ತನ್ನ ಘಟಿಕೋತ್ಸವ ಸಮಾರಂಭದಲ್ಲಿ ವಿವಿಯು ಇಂದ್ರೇಶ್ ಕುಮಾರ್‌ಗೆ ಈ ಗೌರವ ಡಾಕ್ಟರೇಟ್ ಅನ್ನು ಪ್ರದಾನಿಸಿದೆ. ಈ ವಿವಿಯು ಉತ್ತರ ಪ್ರದೇಶ ಸರಕಾರದ ಉಸ್ತುವಾರಿಯಡಿ ಕಾರ್ಯ ನಿರ್ವಹಿಸುತ್ತಿದೆ.
ಇಂದ್ರೇಶ್ ಕುಮಾರ್ ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿರುವುದನ್ನು ದೃಢಪಡಿಸಿದ ವಿವಿಯ ಕುಲಪತಿ ಮಹರುಖ್ ಮಿರ್ಝಾ ಅವರು, ಇದು ಆಡಳಿತಾತ್ಮಕ ಮಂಡಳಿಯು ಸಮಾಜಕ್ಕೆ ಇಂದ್ರೇಶ್ ಕುಮಾರ್ ಅವರ ವಿಶೇಷ ಕೊಡುಗೆಯನ್ನು ಗಮನದಲ್ಲಿಟ್ಟು ಕೊಂಡು ವಿಸ್ತ್ರತ ಚರ್ಚೆ ನಡೆಸಿದ ಬಳಿಕ ತೆಗೆದುಕೊಂಡಿರುವ ನಿರ್ಧಾರವಾಗಿದೆ. ಅವರು ಅಲ್ಪಸಂಖ್ಯಾತರಿಗಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ಈ ರೀತಿಯಲ್ಲಿ ಗೌರವಿಸುವುದು ಗಂಗಾ-ಯಮುನಾ ಸಂಸ್ಕೃತಿಗೆ ಅನುಗುಣವಾಗಿದೆ ಎಂದರು.
ಇಂದ್ರೇಶ್ ಕುಮಾರ್ ಜೊತೆಗೆ ಶಿಯಾ ಧಾರ್ಮಿಕ ನಾಯಕ ಕಲ್ಬೆ ಜವಾದ್, ಆಧ್ಯಾತ್ಮಿಕ ನಾಯಕ ಸ್ವಾಮಿ ಸಾರಂಗ ಮತ್ತು ದಾರುಲ್ ಉಲೂಮ ನದ್ವಾತುಲ್ ಉಲೇಮಾ ಸೆಮಿನರಿಯ ಪ್ರಾಂಶುಪಾಲ ಸಯೀದುರ್ ರಹ್ಮಾನ್ ಆಝ್ಮಿ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನಿಸಲಾಗಿದೆ ಎಂದು ಅವರು ತಿಳಿಸಿದರು.
2007 ಅ.11ರಂದು ಪವಿತ್ರ ರಮಝಾನ ಮಾಸದ ಸಂದರ್ಭದಲ್ಲಿ ಅಜ್ಮೇರ್ ದರ್ಗಾದ ಪ್ರಾಂಗಣದಲ್ಲಿ ಟಿಫಿನ್ ಬಾಕ್ಸ್‌ನಲ್ಲಿದ್ದ ಬಾಂಬ್ ಸ್ಫೋಟಿಸಿ ಮೂವರು ಕೊಲ್ಲಲ್ಲಟ್ಟು,17 ಜನರು ಗಾಯಗೊಂಡಿದ್ದರು.
ಎಪ್ರಿಲ್ 2017ರಲ್ಲಿ ಎನ್‌ಐಎ ಇಂದ್ರೇಶ್ ಕುಮಾರ್ ಹಾಗೂ ಹಾಲಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕುರ್ ಸೇರಿದಂತೆ ಇತರ ನಾಲ್ವರಿಗೆ ಕ್ಲೀನ್ ಚಿಟ್ ನೀಡಿತ್ತು.