ಆಟೊಮೊಬೈಲ್ ಬಿಡಿಭಾಗಗಳ ಕೈಗಾರಿಕೆಗಳಲ್ಲಿ ಕೆಲಸ ಕಳೆದುಕೊಂಡ 1 ಲಕ್ಷ ಉದ್ಯೋಗಿಗಳು

Update: 2019-12-07 09:53 GMT

ಹೊಸದಿಲ್ಲಿ: ಆಟೊಮೊಬೈಲ್ ರಂಗದಲ್ಲಿನ ನಿಧಾನಗತಿಯಿಂದಾಗಿ ಆಟೊಮೊಬೈಲ್ ಬಿಡಿಭಾಗಗಳ ಕೈಗಾರಿಕೆಗಳೂ ತೀವ್ರ ಬಾಧಿತವಾಗಿದ್ದು, ಈ ವರ್ಷದ ಜುಲೈ ತನಕ ಸುಮಾರು ಒಂದು ಲಕ್ಷ ತಾತ್ಕಾಲಿಕ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡಿದ್ದಾರೆ.

ಈ ವರ್ಷದ ಎಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಆಟೊಮೊಬೈಲ್ ಬಿಡಿಭಾಗಗಳ ಕೈಗಾರಿಕೆಗಳ ವಹಿವಾಟು ಶೇ 1.79 ಲಕ್ಷ ಕೋಟಿ ರೂ.ಗೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ವಹಿವಾಟು 1.99 ಲಕ್ಷ ರೂ. ಕೋಟಿಯಷ್ಟಿದ್ದು ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಶೇ 10.1ರಷ್ಟು ವಹಿವಾಟಿನಲ್ಲಿ ಕುಸಿತ ಉಂಟಾಗಿದೆ ಎಂದು ಆಟೊಮೊಬೈಲ್ ಬಿಡಿಭಾಗ ತಯಾರಕರ ಸಂಘದ ಅಧ್ಯಕ್ಷ ದೀಪಕ್ ಜೈನ್ ಹೇಳಿದ್ದಾರೆ.

ಕಳೆದೊಂದು ವರ್ಷದ ಅವಧಿಯಲ್ಲಿ ಎಲ್ಲಾ ವಿಧದ ವಾಹನಗಳ ಮಾರಾಟ ಕುಸಿದಿದೆ ಎಂದೂ ಅವರು ತಿಳಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಜುಲೈ ತನಕ ಉದ್ಯೋಗಿಗಳನ್ನು ಕೈಬಿಡುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅವರು ಹೇಳಿದ್ದಾರೆ.

ಎಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಆಟೋಮೊಬೈಲ್ ಬಿಡಿಭಾಗಗಳ ರಫ್ತು ಪ್ರಮಾಣ  ಶೇ 2.7ರಷ್ಟು ಏರಿಕೆಯಾಗಿ ರೂ 51,397 ಕೋಟಿ ತಲುಪಿದೆ, ಅದೇ ಸಮಯ ಆಮದು ಶೇ 6.7ರಷ್ಟು ಕುಸಿತಗೊಂಡು ರೂ. 57,574 ಕೋಟಿಯಷ್ಟಿತ್ತು ಎಂದು ಸಂಘದ ಮಹಾನಿರ್ದೇಶಕ ವಿನ್ನೀ ಮೆಹ್ತಾ ಮಾಹಿತಿ ನೀಡಿದ್ದಾರೆ.

ಎಲ್ಲಾ ಆಟೊಮೊಬೈಲ್ ಬಿಡಿಭಾಗಗಳಿಗೂ ಸಮಾನ ಶೇ. 18 ಜಿಎಸ್‍ಟಿ ವಿಧಿಸಬೇಕೆಂಬುದು ಸಂಘದ ಬೇಡಿಕೆಯಾಗಿದೆ,. ಸದ್ಯ ಶೇ. 60ರಷ್ಟು ಆಟೋ ಬಿಡಿಭಾಗಗಳಿಗೆ ಶೇ. 18ರಷ್ಟು ಜಿಎಸ್‍ಟಿ ಇದ್ದರೆ ಉಳಿದ ಶೇ. 40ರಷ್ಟು ಬಿಡಿ ಭಾಗಗಳಿಗೆ ಶೇ. 28ರಷ್ಟು ಜಿಎಸ್‍ಟಿ ವಿಧಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News