ಅಸ್ಸಾಂನಲ್ಲಿ ಮುಂದುವರಿದ ಕರ್ಫ್ಯೂ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Update: 2019-12-19 05:41 GMT

ಗುವಾಹಟಿ, ಡಿ.12: ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಅಸ್ಸಾಂನಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಂತೆಯೇ, ಅನಿರ್ಧಿಷ್ಟಾವಧಿ ಕರ್ಫ್ಯೂ ಹಾಗೂ ಇಂಟರ್‌ನೆಟ್ ಸ್ಥಗಿತದ ಕಾರಣದಿಂದ ಗುರುವಾರ ಗುವಾಹಟಿ ವಿಮಾನನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಇಕ್ಕಟ್ಟಿಗೆ ಸಿಲುಕುವಂತಾಗಿದ್ದು ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.

ಗುವಾಹಟಿಯಿಂದ ಸುಮಾರು 30 ಕಿ.ಮೀ ದೂರವಿರುವ ಲೋಕಪ್ರಿಯ ಗೋಪಿನಾಥ್ ಬೊರ್ಡೊಲಾಯಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು ಕಟ್ಟೆಚ್ಚರ ವಹಿಸುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ. ಕರ್ಫ್ಯೂ ಕಾರಣ ವಿಮಾನನಿಲ್ದಾಣದ ಒಳಗೆ ಕಾರ್ಯನಿರ್ವಹಿಸುವ ಪ್ರಿ-ಪೇಯ್ಡ್ ಟ್ಯಾಕ್ಸಿ ಕೌಂಟರ್‌ಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿದ್ಯಾರ್ಥಿಗಳು, ವೃತ್ತಿನಿರತರು, ವೃದ್ಧರು, ಯುವಜನರು ವಿಮಾನ ನಿಲ್ದಾಣದ ಒಳಗೆ ಅಥವಾ ಹೊರಗೆ ಆತಂಕದಿಂದ ಕುಳಿತುಕೊಂಡಿರುವ ದೃಶ್ಯ ಕಂಡುಬಂದಿದೆ. ತನಗೆ ತುರ್ತಾಗಿ ಐಐಟಿ ಕ್ಯಾಂಪಸ್ ತಲುಪಬೇಕಿದೆ. ಆದ್ದರಿಂದ ಐಐಟಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕರ್ಫ್ಯೂ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಓಡಾಡುತ್ತಿಲ್ಲ ಎಂದು ಗುವಾಹಟಿ ಐಐಟಿಯ ಇಬ್ಬರು ವಿದ್ಯಾರ್ಥಿನಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇಟಾನಗರ, ದಿಮಾಪುರ ಮತ್ತಿತರ ದೂರದೂರಿನ ಪ್ರಯಾಣಿಕರು ಪರಿಸ್ಥಿತಿ ತಿಳಿಯಾಗುವುದನ್ನೇ ಕಾಯುತ್ತಾ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ. ಗಾಯದ ಮೇಲೆ ಬರೆ ಎಳೆಯುವಂತೆ, ಹಲವು ಸ್ಥಳೀಯ ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಿಂದ ಗುವಾಹಟಿಗೆ ಬಂದು ಅಲ್ಲಿಂದ ಮಿಝೊರಾಂನ ಐಜ್ವಾಲ್‌ಗೆ ತೆರಳಬೇಕಿರುವ ರೆಮಿ ಮತ್ತು ರೊರಾಮ್ ಎಂಬ ಇಬ್ಬರು ಇದೀಗ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಇಲ್ಲಿರುವ ಮಿಝೊರಾಂ ಭವನವನ್ನು ಸಂಪರ್ಕಿಸಿದ್ದು ಈ ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡಲಿದ್ದೇವೆ ಎಂದವರು ಹೇಳಿದ್ದಾರೆ. ಸೇನೆಯಲ್ಲಿ ಯೋಧರಾಗಿರುವ ಉಸ್ಮಾನ್ ಸಾಬ್ ತನ್ನ ಪತ್ನಿ ಮತ್ತು ಮೂರೂವರೆ ವರ್ಷದ ಮಗುವಿನೊಂದಿಗೆ ಬೆಂಗಳೂರಿನಿಂದ ಗುವಾಹಟಿ ವಿಮಾನನಿಲ್ದಾಣಕ್ಕೆ ಬಂದಿದ್ದು ಈಗ ರೈಲು ನಿಲ್ದಾಣದವರೆಗೆ ಹೋಗಲು ಸಮಸ್ಯೆ ಎದುರಾಗಿದೆ. ಜೈಪುರದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅಜೀತ್ ಜೈನ್ ತನ್ನ ಹುಟ್ಟೂರು ದಿಮಾಪುರಕ್ಕೆ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ರೈಲು ರದ್ದಾದ ಕಾರಣ ವಿಮಾನದ ಮೂಲಕ ಗುವಾಹಟಿ ತಲುಪಿದ್ದಾರೆ. ಈಗ ದಿಮಾಪುರ ತಲುಪಬೇಕಿದ್ದು ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News