ದೇಶದಲ್ಲಿ ಗಲಭೆ ಪ್ರಚೋದಿಸುವ ಸಾಮರ್ಥ್ಯ ಯಾರಿಗಿದೆ ಎಂಬುದು ಎಲ್ಲರಿಗೂ ತಿಳಿದಿದೆ: ಕೇಜ್ರಿವಾಲ್
ಹೊಸದಿಲ್ಲಿ, ಡಿ.18: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಗೆಲುವು ಪಡೆಯುವುದು ನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ದಿಲ್ಲಿಯಲ್ಲಿ ಉದ್ದೇಶಪೂರ್ವಕವಾಗಿ ಹಿಂಸಾಚಾರ ಹರಡುತ್ತಿವೆ. ದೇಶದಲ್ಲಿ ಗಲಭೆ ಪ್ರಚೋದಿಸುವ ಸಾಮರ್ಥ್ಯ ಯಾರಿಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದಿಲ್ಲಿಯಲ್ಲಿ ನಡೆಯುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಬಹುಮತದೊಂದಿಗೆ ಗೆಲುವು ದಾಖಲಿಸುವುದು ನಿಚ್ಚಳವಾಗಿದೆ. ಪಕ್ಷ ಎಲ್ಲಾ 70 ಸ್ಥಾನಗಳನ್ನೂ ಪಡೆಯುತ್ತದೆಯೇ ಅಥವಾ 60 ಸ್ಥಾನಗಳನ್ನೇ ಎಂಬುದು ಈಗಿರುವ ಕುತೂಹಲವಾಗಿದೆ. ಹೀಗಿರುವಾಗ ಹತಾಶ ಪ್ರತಿಪಕ್ಷಗಳು ದಿಲ್ಲಿಯ ಹಲವೆಡೆ ಉದ್ದೇಶಪೂರ್ವಕವಾಗಿ ಹಿಂಸಾಚಾರ ಹರಡುತ್ತಿವೆ ಎಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ.
2015ರ ವಿಧಾಸಭಾ ಚುನಾವಣೆಯ ಮೊದಲೂ ಇದೇ ರೀತಿಯ ಪರಿಸ್ಥಿತಿಯಿತ್ತು. ಪೂರ್ವ ದಿಲ್ಲಿಯ ತ್ರಿಲೋಕಪುರಿ ಮತ್ತು ದಿಲ್ಲಿಯ ಹೊರವಲಯದ ಬಾವನಾ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗಿತ್ತು. ಆಮ್ ಆದ್ಮಿ ಪಕ್ಷ ಇದಕ್ಕೆ ಕಾರಣ ಎಂದು ಎಲ್ಲೆಡೆ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಜನತೆ ಈ ಹಿಂದೆಯೂ ಇದಕ್ಕೆ ಜನಾದೇಶದ ಮೂಲಕ ಉತ್ತರಿಸಿದ್ದಾರೆ. ಈ ಬಾರಿಯೂ ಉತ್ತರಿಸಲಿದ್ದಾರೆ ಎಂಬ ನಿರೀಕ್ಷೆಯಿದೆ ಎಂದರು. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರತಿಭಟನೆ ಶಾಂತರೀತಿಯಲ್ಲಿ ಇರಬೇಕು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಇರಬೇಕು. ಯಾರು ಕೂಡಾ ಹಿಂಸಾಚಾರದಲ್ಲಿ ತೊಡಗಬಾರದು ಎಂದು ಕೇಜ್ರೀವಾಲ್ ಹೇಳಿದರು.