ಆಕ್ರೋಶಿತ ಗುಂಪಿನಿಂದ ಪೊಲೀಸರನ್ನು ರಕ್ಷಿಸಿದ ಸಿಎಎ ಪ್ರತಿಭಟನಕಾರರು

Update: 2019-12-20 17:21 GMT

ಹೊಸದಿಲ್ಲಿ, ಡಿ. 20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರು ಹಾಗೂ ಪೊಲೀಸರ ಘರ್ಷಣೆಯ ಘಟನೆಗಳ ನಡುವೆ ಆಕ್ರೋಶಿತ ಗುಂಪೊಂದರಿಂದ ಪೊಲೀಸರನ್ನು ರಕ್ಷಿಸಲು ಮುಸ್ಲಿಂ ಯುವಕರು ಪ್ರತಿಭಟನೆ ತ್ಯಜಿಸಿ ಮುಂದಾದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಶುಕ್ರವಾರ ನಡೆದಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆದಂತೆ ಡಿಸೆಂಬರ್ 19ರಂದು ಅಹ್ಮದಾಬಾದ್ ಕೂಡ ಪ್ರತಿಭಟನೆ ನಡೆಯಿತು. ಸಂಘಟನೆಗಳ ಗುಂಪೊಂದು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಪ್ರತಿಭಟನೆ ನಡೆದಿತ್ತು. ನಗರದ ಶಾ-ಎ-ಅಲಂನಲ್ಲಿ ಕೂಡ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನಕಾರರು ಸೇರಿದ್ದರು. ಇಲ್ಲಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, 30 ಮಂದಿ ಪ್ರತಿಭಟನಕಾರರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ, ಕೂಡಲೇ ಪ್ರತಿಭಟನಕಾರರ ಸಂಖ್ಯೆ ಹೆಚ್ಚಾಯಿತು. ಉದ್ರಿಕ್ತ ಗುಂಪು ಪೊಲೀಸ್ ವಾಹನ ಸಂಚಾರ ತಡೆ ಹಿಡಿಯಿತು. ಪೊಲೀಸರನ್ನು ಅಟ್ಟಿಸಿಕೊಂಡು ಹೋಯಿತು. ಅವರ ಮೇಲೆ ಕಲ್ಲು ತೂರಾಟ ನಡೆಸಿತು.

 ಈ ಸಂದರ್ಭ ನಾಲ್ವರು ಪೊಲೀಸರು ಉದ್ರಿಕ್ತ ಗುಂಪಿನ ಕೈಗೆ ಸಿಕ್ಕಿದರು. ಈ ಸಂದರ್ಭ ಪ್ರತಿಭಟನೆಯಲ್ಲಿ ಪಾಲ್ಗೊಂಡ ಓರ್ವ ಮುಸ್ಲಿಂ ಯುವಕ ಪ್ರತಿಭಟನೆ ತ್ಯಜಿಸಿ ಪೊಲೀಸರನ್ನು ರಕ್ಷಿಸಲು ಧಾವಿಸಿ ಬಂದರು. ಅವರೊಂದಿಗೆ ಇತರ 6 ಮಂದಿ ಸೇರಿದರು. ಉದ್ರಿಕ್ತ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸುವುದನ್ನು ತಡೆದರು. ಮಾಸ್ಕ್ ಹಾಕಿಕೊಂಡು, ಒಂದು ಕೈಯಲ್ಲಿ ಕ್ರೇಟರ್ ಹಾಗೂ ಇನ್ನೊಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡ ಯುವಕ ಸೇರಿದಂತೆ 7 ಮಂದಿ ಯುವಕರು ಪೊಲೀಸರಿಗೆ ಮಾನವ ಗುರಾಣಿಯಾಗಿ ರಕ್ಷಣೆ ನೀಡಿದ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News