ಗೋವಾದಲ್ಲಿ ಎನ್‍ಆರ್ ಸಿ ಅಗತ್ಯವಿಲ್ಲ : ಮುಖ್ಯಮಂತ್ರಿ ಪ್ರಮೋದ್ ಸಾವಂತ್
ಪಣಜಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್ ಸಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಹೇಳಿಕೆ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಎನ್‍ಆರ್ ಸಿ ಗೋವಾದಲ್ಲಿ ಜಾರಿಗೊಳಿಸುವ ಅಗತ್ಯವೇ ಇರದು ಎಂದಿದ್ದಾರೆ.
ಉತ್ತರ ಗೋವಾದಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಸಾವಂತ್, ರಾಜ್ಯದ ನಾಗರಿಕರು ಪೌರತ್ವ ಕಾಯಿದೆಯ ಬಗ್ಗೆ ಭಯ ಹೊಂದುವುದು ಅಗತ್ಯವಿಲ್ಲ ಎಂದರು. ಪೋರ್ಚುಗೀಸ್ ಪಾಸ್‍ಪೋರ್ಟ್‍ಗಳನ್ನು ಹೊಂದಿರುವ ಸಾವಿರಾರು ಗೋವನ್ನರು ಹಾಗೂ ಅವರ ಕುಟುಂಬಗಳ ಭವಿಷ್ಯ ತೂಗುಯ್ಯಾಲೆಯಲ್ಲಿರುವಂತೆ ರಾಜ್ಯದ ಬಿಜೆಪಿ ನೇತೃತ್ವದ ಸರಕಾರ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಬಂದಿದೆ.
ಎನ್‍ಆರ್ ಸಿಗೆ ಪೂರ್ವಭಾವಿ ಎಂದು ತಿಳಿಯಲಾದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಪ್ರಕ್ರಿಯೆಗೆ ರಾಜ್ಯ ಸರಕಾರ ಹೊರಡಿಸಿದ ಗಜೆಟ್ ನೋಟಿಫಿಕೇಶನ್ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ತಾವು ಗಜೆಟ್ ನೋಟಿಫಿಕೇಶನ್ ಓದಿದ ನಂತರ ಉತ್ತರಿಸುವುದಾಗಿ ಹೇಳಿದರು.
ಸಿಎಎ ರಾಜ್ಯದ ಜನತೆಯ ಮೇಲೆ ಪರಿಣಾಮ ಬೀರದು, ಪೋರ್ಚುಗೀಸ್ ಪಾಸ್‍ಪೋರ್ಟ್ ಹೊಂದಿದವರು ಭಾರತೀಯ ಪೌರತ್ವ ಪಡೆಯಬೇಕೆಂದಿದ್ದರೆ ಅದಕ್ಕೆ ಸೂಕ್ತ ಪ್ರಕ್ರಿಯೆಗಳಿವೆ ಎಂದರು.