ಶ್ರೀನಗರ: ಆಗಸ್ಟ್‌ನಿಂದ ಪೊಲೀಸ್ ವಶದಲ್ಲಿದ್ದ ಐವರು ರಾಜಕಾರಣಿಗಳ ಬಿಡುಗಡೆ

Update: 2019-12-30 17:23 GMT

ಹೊಸದಿಲ್ಲಿ, ಡಿ. 30: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಗೊಳಿಸುವ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರಕಾರ ವಶಕ್ಕೆ ತೆಗೆದುಕೊಂಡು ಶ್ರೀಗರದಲ್ಲಿ ಇರಿಸಿದ್ದ ಐವರು ರಾಜಕಾರಣಿಗಳನ್ನು ಸುಮಾರು 5 ತಿಂಗಳ ಬಳಿಕ ಸೋಮವಾರ ಬಿಡುಗಡೆ ಮಾಡಲಾಗಿದೆ.

ಆದರೆ, ಕಾಶ್ಮೀರದ ಮೂವರು ಪ್ರಮುಖ ನಾಯಕರಾದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಉಮರ್ ಅಬ್ದುಲ್ಲಾ ಹಾಗೂ ಪಿಡಿಪಿಯ ವರಿಷ್ಠೆ ಮೆಹಬೂಬಾ ಮುಫ್ತಿ ಅವರ ಬಂಧನವನ್ನು ಮುಂದುವರಿಸಲಾಗಿದೆ. ಅವರ ಬಿಡುಗಡೆಯ ನಿರ್ದಿಷ್ಟ ದಿನಾಂಕವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿಲ್ಲ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾತ್ರ ಹೇಳುತ್ತಿದೆ. 30 ಮಾಜಿ ಸಚಿವರು ಹಾಗೂ ಶಾಸಕರು ಇರುವ ಎಂಎಲ್‌ಎ ಹಾಸ್ಟೆಲ್‌ನಿಂದ ಐವರು ಮಾಜಿ ಶಾಸಕರನ್ನು ಬಿಡುಗಡೆಗೊಳಿಸಲಾಗಿದೆ.

 ಇಶ್ಫಾಕ್ ಜಬ್ಬಾರ್, ಗುಲಾಮ್ ನಬಿ ಭಟ್, ಬಶೀರ್ ಮಿರ್ ಝಹೂರ್ ಮಿರ್ ಹಾಗೂ ಯಾಸಿರ್ ರೇಶಿ ಸೇರಿದಂತೆ ಐವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ. ಇವರು ಪಿಡಿಪಿ, ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ವಿಧಿ 370ನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಆಗಸ್ಟ್ 5ರಂದು ರದ್ದುಗೊಳಿಸಿತ್ತು.

ರಾಜ್ಯದಲ್ಲಿ ಅಹಿತಕರ ಘಟನೆ ನಡೆಯದಂತೆ ನಿರ್ಬಂಧ ವಿಧಿಸಿತ್ತು. ಅನಂತರ ರಾಜ್ಯವನ್ನು ಜಮ್ಮು ಹಾಗೂ ಕಾಶ್ಮೀರ, ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಗೊಳಿಸುವ ಮುನ್ನ ರಾಜ್ಯದ ಹೆಚ್ಚಿನ ರಾಜಕೀಯ ನಾಯಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News