ಸಿಎಎ ವಿರುದ್ಧ ಸಲ್ಲಿಸಲಾದ 140 ಕ್ಕೂ ಹೆಚ್ಚು ಮನವಿಗಳನ್ನು ಆಲಿಸಲಿರುವ ಸುಪ್ರೀಂ ಕೋರ್ಟ್

Update: 2020-01-22 04:47 GMT

ಹೊಸದಿಲ್ಲಿ, ಜ.22: ಪೌರತ್ವ  ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಸಲ್ಲಿಸಲಾದ 140ಕ್ಕೂ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಝೀರ್   ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠವು  ಬುಧವಾರ  ಆಲಿಸಲಿದೆ.

 ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್  ಸಲ್ಲಿಸಿರುವ ಅರ್ಜಿಗಳು ಸೇರಿದಂತೆ 140 ಕ್ಕೂ ಹೆಚ್ಚು ಅರ್ಜಿಗಳ  ವಿಚಾರಣೆಯನ್ನು  ಸುಪ್ರೀಂ ಕೋರ್ಟ್ ತ್ರಿಸದಸ್ಯ  ನ್ಯಾಯಪೀಠ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಝೀರ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠವು ವಿವಿಧ ಅರ್ಜಿಗಳ  ಕುರಿತು ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ. ನಂತರ ಸಲ್ಲಿಸಿದ ಕೆಲವು ಅರ್ಜಿಗಳು ಜನವರಿ 10 ರಿಂದ ಜಾರಿಗೆ ಬಂದಿರುವ ಶಾಸನದ ಅನುಷ್ಠಾನಕ್ಕೆ  ತಡೆಯಾಜ್ಞೆ ನೀಡಲು ಕೋರಿವೆ.

ಸಿಎಎ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಧರ್ಮದ ಆಧಾರದ ಮೇಲೆ ಹೊರಗಿಡುವ ಮೂಲಕ ಅಕ್ರಮ ವಲಸಿಗರ ಒಂದು ಭಾಗಕ್ಕೆ ಪೌರತ್ವವನ್ನು ನೀಡಲು ಉದ್ದೇಶಿಸಿದೆ ಎಂದು ಐಯುಎಂಎಲ್ ತನ್ನ ಮನವಿಯಲ್ಲಿ ಹೇಳಿದೆ.

ರಾಷ್ಟ್ರಪತಿ   ರಾಮ್ ನಾಥ್ ಕೋವಿಂದ್ ಅವರು ಡಿಸೆಂಬರ್ 12 ರಂದು 2019ರ ಪೌರತ್ವ  ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದರು.  ಬಳಿಕ ಅದು  ಕಾಯ್ದೆಯಾಗಿ ಜಾರಿಗೆ ಬಂದಿದೆ.  

ಸಿಎಎ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ ಮತ್ತು ಮುಸ್ಲಿಮರ ವಿರುದ್ಧ ಸ್ಪಷ್ಟವಾಗಿ ತಾರತಮ್ಯ ಮಾಡುವ ಉದ್ದೇಶವನ್ನು  ಹೊಂದಿದೆ. ಈ ಕಾಯ್ದೆಯು ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಮಾತ್ರ ವಿಸ್ತರಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಲ್ಲಿಸಿದ್ದ ಮನವಿಯಲ್ಲಿ, ಈ ಕಾಯ್ದೆಯು ಸಂವಿಧಾನದಡಿಯಲ್ಲಿ ರೂಪಿಸಲಾಗಿರುವ ಪ್ರಮುಖ ಮೂಲಭೂತ ಹಕ್ಕುಗಳ ಮೇಲಿನ "ಲಜ್ಜೆಗೆಟ್ಟ ದಾಳಿ" ಮತ್ತು "ಸಮಾನತೆಯನ್ನು ಅಸಮಾನ" ಎಂದು ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಪೌರತ್ವವನ್ನು ಪಡೆಯಲು ಅಥವಾ ನಿರಾಕರಿಸಲು ಧರ್ಮವು ಒಂದು ಅಂಶವಾಗಬಹುದೇ ಎಂಬ ಕಾನೂನಿನ ಗಣನೀಯ ಪ್ರಶ್ನೆಗಳು ನ್ಯಾಯಾಲಯದ ಪರಿಗಣನೆಗೆ ಉದ್ಭವಿಸುತ್ತವೆ, ಏಕೆಂದರೆ ಇದು 1955 ರ ಪೌರತ್ವ ಕಾಯ್ದೆಗೆ "ಅಸಹ್ಯವಾಗಿ ಅಸಂವಿಧಾನಿಕ" ತಿದ್ದುಪಡಿಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಆರ್ಜೆಡಿ ನಾಯಕ ಮನೋಜ್ ಝಾ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಎಐಐಎಂ ನಾಯಕ ಅಸದುದ್ದೀನ್ ಒವೈಸಿ , ಜಮಿಯತ್ ಉಲಾಮಾ-ಎ-ಹಿಂದ್, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್‌ಯು), ಪೀಸ್ ಪಾರ್ಟಿ, ಸಿಪಿಐ, ಎನ್‌ಜಿಒಗಳಾದ 'ರಿಹೈ ಮಂಚ್' ಮತ್ತು ಸಿಟಿಜನ್ಸ್ ಎಗೇನ್ಸ್ಟ್ ಹೇಟ್, ವಕೀಲ ಎಂ.ಎಲ್.ಶರ್ಮಾ, ಮತ್ತು ಕಾನೂನು ವಿದ್ಯಾರ್ಥಿಗಳು ಸಿಎಎಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

 ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014 ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ದೇಶಕ್ಕೆ ವಲಸೆ ಬಂದಿರುವ  ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ್ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)  ರೂಪುಗೊಂಡಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News