ಸರಕಾರಿ ಜಾಹೀರಾತುಗಳನ್ನು ನಿಲ್ಲಿಸಿ: ಪ್ರಧಾನಿಗೆ 5 ಸಲಹೆಗಳನ್ನು ನೀಡಿದ ಸೋನಿಯಾ

Update: 2020-04-07 14:18 GMT

ಹೊಸದಿಲ್ಲಿ,ಎ.7: ಕೊರೋನ ವೈರಸ್ ವಿರುದ್ಧ ಹೋರಾಟಕ್ಕಾಗಿ ಹಣವನ್ನುಳಿಸಲು ಐದು ಕ್ರಮಗಳನ್ನು ಸೂಚಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.

ಸರಕಾರ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮ(ಪಿಎಸ್‌ಯು)ಗಳಿಂದ ಮಾಧ್ಯಮ ಜಾಹೀರಾತುಗಳ ಮೇಲೆ ಎರಡು ವರ್ಷಗಳ ಸಂಪೂರ್ಣ ನಿಷೇಧ ಮತ್ತು 20,000 ಕೋ.ರೂ.ವೆಚ್ಚದಲ್ಲಿ ದಿಲ್ಲಿಯ ಐತಿಹಾಸಿಕ ಕಟ್ಟಡಗಳ ಪುನಃಶ್ಚೇತನ ಮತ್ತು ಪುನರ್‌ನಿರ್ಮಾಣದ ‘ಸೆಂಟ್ರಲ್ ವಿಸ್ತಾ ಸುಂದರೀಕರಣ ಯೋಜನೆ ’ಯ ಅಮಾನತು ಈ ಕ್ರಮಗಳಲ್ಲಿ ಸೇರಿವೆ.

ಮೋದಿಯವರು ಇತ್ತೀಚಿಗೆ ಸೋನಿಯಾ ಸೇರಿದಂತೆ ಪ್ರತಿಪಕ್ಷ ನಾಯಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಕೊರೋನ ವೈರಸ್ ಮತ್ತು ಲಾಕ್‌ಡೌನ್ ಬಗ್ಗೆ ಚರ್ಚಿಸಿದ್ದರು.

ವೇತನಗಳು, ಪಿಂಚಣಿಗಳು ಮತ್ತು ಕೇಂದ್ರ ವಲಯದ ಯೋಜನೆಗಳನ್ನು ಹೊರತುಪಡಿಸಿ ಭಾರತ ಸರಕಾರದ ವೆಚ್ಚ ಬಜೆಟ್‌ನಲ್ಲಿ ಶೇ.30ರಷ್ಟು ಕಡಿತಕ್ಕೆ ಆದೇಶಿಸುವಂತೆ ಹಾಗೂ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳ ಎಲ್ಲ ವಿದೇಶ ಪ್ರವಾಸಗಳನ್ನು ತಡೆಹಿಡಿಯಬೇಕು ಎಂದೂ ಸೋನಿಯಾ ಪತ್ರದಲ್ಲಿ ಸೂಚಿಸಿದ್ದಾರೆ.

‘ಪಿಎಂ ಕೇರ್ಸ್ ನಿಧಿ’ಅಡಿ ಸಂಗ್ರಹಿತ ಎಲ್ಲ ಹಣವನ್ನು ದಕ್ಷತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಲು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸುವಂತೆಯೂ ಅವರು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News