ಕೀಮೋಥೆರಪಿಗಾಗಿ ಕ್ಯಾನ್ಸರ್ ಪೀಡಿತ ಪತ್ನಿಯನ್ನು 130 ಕಿ.ಮೀ. ದೂರದ ಆಸ್ಪತ್ರೆಗೆ ಸೈಕಲ್ ನಲ್ಲಿ ಕರೆದೊಯ್ದ ವೃದ್ಧ

Update: 2020-04-12 14:15 GMT
Photo: thenewsminute.com

ಪುದುಚೇರಿ: ತಮಿಳುನಾಡಿನ ಪುಟ್ಟ ಹಳ್ಳಿಯ 65 ವರ್ಷದ ವೃದ್ಧರೊಬ್ಬರು ಪತ್ನಿಯನ್ನು ಸೈಕಲ್‍ ನಲ್ಲಿ ಕೂರಿಸಿಕೊಂಡು 130 ಕಿ.ಮೀ. ಕ್ರಮಿಸಿ ಪುದುಚೇರಿಯ ಆಸ್ಪತ್ರೆಗೆ ಕಿಮೋಥೆರಪಿಗಾಗಿ ಕರೆತಂದಿದ್ದಾರೆ.

ರಾಷ್ಟ್ರವ್ಯಾಪಿ ಲಾಕ್‍ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿದ್ದರಿಂದ ದಿನಗೂಲಿ ನೌಕರರಾದ ಅರಿವಳಗನ್ ಅವರಂಥ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಿವಳಗನ್ ಕ್ಯಾನ್ಸರ್‍ ನಿಂದ ಬಳಲುತ್ತಿರುವ ಪತ್ನಿಯನ್ನು ಪುದುಚೇರಿಯ ಜವಾಹರಲಾಲ್ ಇನ್‍ ಸ್ಟಿಟ್ಯೂಟ್ ಆಫ್ ಪೋಸ್ಟ್‍ ಗ್ರಾಜ್ಯುಯೇಟ್ ಮೆಡಿಕಲ್‍ ಎಜ್ಯುಕೇಶನ್‍ ಆ್ಯಂಡ್‍ ರೀಸರ್ಚ್ ಸೆಂಟರ್‍ ಗೆ ಕಿಮೋಥೆರಪಿಗಾಗಿ ಕರೆದೊಯ್ಯಬೇಕಿತ್ತು. ಮಾರ್ಚ್ 31ರಂದು ಅನ್ಯ ಮಾರ್ಗವಿಲ್ಲದೇ ಅರಿವಳಗನ್ ತಮ್ಮ 60 ವರ್ಷದ ಪತ್ನಿ ಮಂಜುಳಾ ಅವರನ್ನು ಸೈಕಲ್‍ ನಲ್ಲಿ ಕೂರಿಸಿಕೊಂಡು ಕುಂಭಕೋಣಂ ಸಮೀಪದ ತಮ್ಮಗ್ರಾಮದಿಂದ ಪುದುಚೇರಿಗೆ ಯಾತ್ರೆ ಹೊರಟರು.

ಪತ್ನಿಯನ್ನು ಸೈಕಲ್‍ ಕ್ಯಾರಿಯರ್‍ ನಲ್ಲಿ ಕೂರಿಸಿ, ಆಧಾರಕ್ಕಾಗಿ ಟವೆಲ್‍ನಿಂದಕಟ್ಟಿ, ಧೋತಿ ಕಟ್ಟಿಕೊಂಡು ಅರಿವಳಗನ್ ಸೈಕಲ್ ತುಳಿಯಲಾರಂಭಿಸಿದರು. ಬೆಳಗ್ಗೆ 4:45ಕ್ಕೆ ಊರಿನಿಂದ ಹೊರಟ ಅರಿವಳಗನ್ ರಾತ್ರಿ 10:15ಕ್ಕೆ ಆಸ್ಪತ್ರೆ ತಲುಪಿದರು. ಮಧ್ಯೆ ಚಹಾ ಸೇವನೆಗಾಗಿ ಒಮ್ಮೆ ನಿಂತಿದ್ದ ಅವರು, ಸುಮಾರು ಎರಡು ಗಂಟೆ ಕಾಲ ದಾರಿ ಮಧ್ಯೆ ಕೆರೆ ಬದಿಯಲ್ಲಿ ನಿದ್ರಿಸಿ ಪ್ರಯಾಣ ಮುಂದುವರಿಸಿದ್ದರು.

ಕೊರೋನ ಚಿಕಿತ್ಸೆಗಾಗಿ ಆಸ್ಪತ್ರೆಯ ಓಪಿಡಿ ಸ್ಥಗಿತಗೊಳಿಸಿದ್ದರೂ, ಇವರ ಕಥೆ ಕೇಳಿದ ವೈದ್ಯರು, ಮಂಜುಳಾ ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ರಾತ್ರಿ ದಂಪತಿಯನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡು ಆಹಾರ ನೀಡಿ ಮರುದಿನ ಬೆಳಗ್ಗೆ ಆ್ಯಂಬುಲೆನ್ಸ್‍ ನಲ್ಲಿ ಕಳುಹಿಸಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News