ಕೆಂಪು ವಲಯದಲ್ಲಿ ಮೇ 3ರ ಬಳಿಕವೂ ಲಾಕ್‌ಡೌನ್ ಮುಂದುವರಿಯಲಿ: ಕೋವಿಡ್-19 ಕಾರ್ಯಪಡೆ ಶಿಫಾರಸು

Update: 2020-04-21 17:37 GMT

ಹೊಸದಿಲ್ಲಿ, ಎ. 21: ಅತ್ಯಧಿಕ ಪ್ರಮಾಣದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣ ದೃಢಪಟ್ಟಿರುವ ಕೆಂಪು ವಲಯ ಅಥವಾ ಹಾಟ್‌ಸ್ಪಾಟ್ ಎಂದು ಗುರುತಿಸಿರುವ ಜಿಲ್ಲೆಗಳಲ್ಲಿ ಮೇ 3ರ ಬಳಿಕವೂ ಲಾಕ್‌ಡೌನ್ ಮುಂದುವರಿಸುವಂತೆ ಕೋವಿಡ್-19 ಪ್ರಕರಣಗಳ ನಿರ್ವಹಣೆ ಕುರಿತ ರಾಷ್ಟ್ರೀಯ ಕಾರ್ಯಪಡೆ ಸರಕಾರಕ್ಕೆ ಶಿಫಾರಸು ಮಾಡಿದೆ.

ಹಾಟ್‌ಸ್ಪಾಟ್ ಜಿಲ್ಲೆಗಳು ಕೋವಿಡ್-19 ನಿಯಂತ್ರಣ ಯೋಜನೆಯಡಿಯಲ್ಲಿಯೇ ಮುಂದುವರಿಯಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಬಹುದು ಎಂದು ಕಾರ್ಯಪಡೆಯ ಸದಸ್ಯರೊಬ್ಬರು ಹೇಳಿದ್ದಾರೆ. ಕಾರ್ಯಪಡೆಯಲ್ಲಿ 21 ತಜ್ಞ ಸದಸ್ಯರಿದ್ದಾರೆ.

ಇದುವರೆಗೆ, 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 170 ಜಿಲ್ಲೆಗಳನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಕೊರೋನ ಸೋಂಕು ಹತ್ತಿಕ್ಕುವ ನಿಟ್ಟಿನಲ್ಲಿ ಹಾಟ್‌ಸ್ಪಾಟ್‌ಗಳನ್ನು ನಿರ್ಬಂಧಿತ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಈ 170 ಜಿಲ್ಲೆಗಳಲ್ಲಿ ವ್ಯಾಪಕ ಸೋಂಕು ಪ್ರಕರಣದ 123 ಜಿಲ್ಲೆಗಳು , 47 ಸಮೂಹ ಪ್ರದೇಶಗಳು ಸೇರಿವೆ. ಅಲ್ಲದೆ 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕನಿಷ್ಟ 1 ಪ್ರಕರಣ ದೃಢಪಟ್ಟಿದೆ.

ಒಂದು ಪ್ರಕರಣ ದೃಢಪಟ್ಟಿರುವ ಪ್ರದೇಶಗಳಲ್ಲೂ ಆಂಶಿಕ ಲಾಕ್‌ಡೌನ್ ಮುಂದುವರಿಯಬೇಕು. ಆದರೆ ಕೊರೋನ ಸೋಂಕಿತ ರೋಗಿಗಳು ಇಲ್ಲದ ಜಿಲ್ಲೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ಮರಳಿಸಲು ಅವಕಾಶ ನೀಡಬಹುದು ಎಂದು ಕಾರ್ಯಪಡೆ ಸಲಹೆ ನೀಡಿದೆ. ನೀತಿ ಆಯೋಗದ ಸದಸ್ಯ ಡಾ ವಿಕೆ ಪೌಲ್ ಕಾರ್ಯಪಡೆಯ ಅಧ್ಯಕ್ಷರಾಗಿದ್ದಾರೆ.

ಈ ಮಧ್ಯೆ, ಹಾಟ್‌ಸ್ಪಾಟ್ ಅಲ್ಲದ ಅಥವಾ ಹಸಿರು ವಲಯವೆಂದು ಗುರುತಿಸಿರುವ ವಲಯದ ಪ್ರತೀ ಜಿಲ್ಲೆಯಲ್ಲೂ ಜನರನ್ನು ಕ್ಷಿಪ್ರ ಅನಿಯಮಿತ(ರ್ಯಾಂಡಮ್) ಪರೀಕ್ಷೆಗೆ ಗುರಿಪಡಿಸಬೇಕು ಎಂದು ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಕಣ್ಗಾವಲು ಕುರಿತ ತಜ್ಞರ ಸಮಿತಿ ಸರಕಾರಕ್ಕೆ ಸಲಹೆ ನೀಡಿದ್ದು, ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸರಕಾರ ತಿಳಿಸಿದೆ.

ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು , ರಾಜ್ಯ ಸರಕಾರಗಳ ಜೊತೆ ಸಮಾಲೋಚಿಸಿ ಲಾಕ್‌ಡೌನ್ ಅನ್ನು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಅಲ್ಲದೆ ತಜ್ಞರ ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News