ಚೀನಾದಿಂದ ಆಮದಾದ ಕೊರೋನ ಕಿಟ್‌ಗಳಿಗೆ 400 ರೂ. ಬೆಲೆ ನಿಗದಿಗೊಳಿಸಿದ ಹೈಕೋರ್ಟ್

Update: 2020-04-26 15:23 GMT

ಹೊಸದಿಲ್ಲಿ, ಎ.26: ಕೊರೋನ ಸೋಂಕು ಪರೀಕ್ಷಿಸುವ ಕಿಟ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಮೂರು ಖಾಸಗಿ ಕಂಪೆನಿಗಳು ಇವುಗಳ ಮಾರಾಟ ಬೆಲೆಯನ್ನು 400 ರೂ.ಗೆ ನಿಗದಿಗೊಳಿಸಬೇಕು. ಖಾಸಗಿ ಲಾಭಕ್ಕಿಂತ ಸಾರ್ವಜನಿಕರ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ದಿಲ್ಲಿ ಹೈಕೋರ್ಟ್ ಸೂಚಿಸಿದೆ.

ಈ ಖಾಸಗಿ ಸಂಸ್ಥೆಗಳು ಚೀನಾದಿಂದ 10 ಲಕ್ಷ ಕಿಟ್‌ಗಳನ್ನು ಆಮದು ಮಾಡಿಕೊಂಡು ಅವನ್ನು ಭಾರತದಲ್ಲಿ ಪ್ರತೀ ಕಿಟ್‌ಗೆ 600 ರೂ. ಬೆಲೆಯಲ್ಲಿ ( ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನುಮೋದಿಸಿದ ದರ) ಮಾರಾಟ ಮಾಡುವ ಕುರಿತು ಒಪ್ಪಂದ ಮಾಡಿಕೊಂಡಿದ್ದವು.

ಚೀನಾದಿಂದ 10 ಲಕ್ಷ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲು ಭಾರತದ ರ್ಯಾರ್ ಮೆಟಬೊಲಿಕ್ಸ್ ಲೈಫ್ ಮತ್ತು ಆರ್ಕ್ ಫಾರ್ಮಸ್ಯುಟಿಕಲ್ಸ್ ಎಂಬ ಎರಡು ಸಂಸ್ಥೆಗಳು ಮ್ಯಾಟ್ರಿಕ್ಸ್ ಲ್ಯಾಬ್ಸ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು. ಇದರಲ್ಲಿ 5 ಲಕ್ಷ ಕಿಟ್‌ಗಳು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್)ಗೆ ಸೇರಬೇಕಿದೆ. ಮೊದಲ ಹಂತದಲ್ಲಿ ತಲಾ 600 ರೂ.ಯಂತೆ 5 ಲಕ್ಷ ಕಿಟ್‌ಗಳಿಗೆ ಒಟ್ಟು 12.75 ಕೋಟಿ ರೂ. ಪಾವತಿಸಲಾಗಿದೆ. ಐಸಿಎಂಆರ್‌ನಿಂದ ಹಣ ಬಂದ ಬಳಿಕ ಉಳಿದ 8.25 ಕೋಟಿ ರೂ.ಯನ್ನು ಪಾವತಿಸುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಇದುವರೆಗೆ ಕೇವಲ 2.76 ಲಕ್ಷ ಕಿಟ್‌ಗಳನ್ನು ಪೂರೈಸಿರುವ ಸಂಸ್ಥೆ, (5 ಲಕ್ಷ ಕಿಟ್‌ಗಳ ಮೊದಲ ಹಂತದಲ್ಲಿ ) ಉಳಿದ 2.24 ಲಕ್ಷ ಕಿಟ್‌ಗಳನ್ನು ಪೂರೈಸಬೇಕಿದ್ದರೆ ಪೂರ್ಣ ಹಣ ಪಾವತಿಸಬೇಕು ಎಂದು ಮ್ಯಾಟ್ರಿಕ್ಸ್ ಲ್ಯಾಬ್ ತಕರಾರು ಎತ್ತಿದೆ. ಆದ್ದರಿಂದ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ರ್ಯಾರ್ ಮೆಟಬೊಲಿಕ್ಸ್ ಲೈಫ್ ಮತ್ತು ಆರ್ಕ್ ಫಾರ್ಮಸ್ಯುಟಿಕಲ್ಸ್ ಸಂಸ್ಥೆ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪರೀಕ್ಷೆಯ ಕಿಟ್‌ಗಳು ತುರ್ತಾಗಿ ಬೇಕಿರುವುದರಿಂದ , ಕಿಟ್‌ಗಳು ಭಾರತಕ್ಕೆ ಬಂದೊಡನೆ ಮೊದಲು ಐಸಿಎಂಆರ್‌ಗೆ 2.24 ಲಕ್ಷ ಕಿಟ್ ಪೂರೈಸಬೇಕು. ಐಸಿಎಂಆರ್‌ನಿಂದ ಹಣ ಪಾವತಿಯಾದ 24 ಗಂಟೆಯೊಳಗೆ ಉಳಿದ 8.25 ಕೋಟಿ ರೂ. ಮೊತ್ತವನ್ನು ಮ್ಯಾಟ್ರಿಕ್ಸ್ ಸಂಸ್ಥೆಗೆ ಪಾವತಿಸಬೇಕು ಎಂದು ಸೂಚಿಸಿದರು.

 ಉಳಿದ 5 ಲಕ್ಷ ಕಿಟ್‌ಗಳಲ್ಲಿ 50,000 ಕಿಟ್‌ಗಳನ್ನು ತಮಿಳುನಾಡು ಸರಕಾರಕ್ಕೆ ತೆಗೆದಿರಿಸಬೇಕು. ನಂತರ ಉಳಿದ 4.5 ಲಕ್ಷ ಕಿಟ್‌ಗಳನ್ನು ಸರಕಾರ, ಸರಕಾರದ ಏಜೆನ್ಸಿಗಳು ಅಥವಾ ಖಾಸಗಿ ಸಂಸ್ಥೆಗೆ ಪ್ರತೀ ಕಿಟ್‌ಗೆ 400 ರೂ. ಬೆಲೆಯಲ್ಲಿ ಪೂರೈಸಬಹುದು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಚೀನಾದಿಂದ ಆಮದಾಗಿರುವ ಕ್ಷಿಪ್ರ ಪರೀಕ್ಷೆಯ ಕಿಟ್‌ಗಳಲ್ಲಿ ದೋಷ ಇರುವುದರಿಂದ ಇವನ್ನು ಬಳಸಿ ಪರೀಕ್ಷೆ ಮಾಡುವುದನ್ನು ಐಸಿಎಂಆರ್ ಸ್ಥಗಿತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News