‘ಸರಳವಾದ ಉತ್ತರ ಬೇಕು’: ಆರ್‌ಬಿಐ ಪಟ್ಟಿ ಕುರಿತು ವಿತ್ತಸಚಿವೆಗೆ ಕಾಂಗ್ರೆಸ್ ತಿರುಗೇಟು

Update: 2020-04-29 15:58 GMT

ಹೊಸದಿಲ್ಲಿ, ಎ.29: ವಿಜಯ ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿಯಂತಹ ದೇಶಭ್ರಷ್ಟ ಉದ್ಯಮಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ‘ಉದ್ದೇಶಪೂರ್ವಕ ಸುಸ್ತಿದಾರರು,ಕೆಟ್ಟ ಸಾಲಗಳು ಮತ್ತು ಸಾಲಮನ್ನಾಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪಗಳು ಮತ್ತು ಜನರನ್ನು ದಾರಿ ತಪ್ಪಿಸುವ ಅವರ ಪ್ರಯತ್ನಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಸರಣಿ ಟ್ವೀಟ್‌ಗಳಲ್ಲಿ ಮಾಡಿರುವ ಕಟುವಾಗಿ ಟೀಕಿಸಿರುವುದಕ್ಕೆ ತಿರುಗೇಟು ನೀಡಿರುವ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಅವರು, ವಿತ್ತಸಚಿವರಂತಹ ಘನತೆಯ ಹುದ್ದೆಯಲ್ಲಿದ್ದು ತಪ್ಪು ಮಾಹಿತಿಗಳನ್ನು ಒದಗಿಸುವುದು ಅನ್ಯಾಯವಾಗುತ್ತದೆ ಎಂದು ಹೇಳಿದ್ದಾರೆ. ಮಲ್ಯ,ಮೋದಿ ಮತ್ತು ಚೋಕ್ಸಿ ಅವರಿಂದ ಮರುವಸೂಲಿ ಮಾಡಲಾಗಿದೆ ಎನ್ನಲಾಗಿರುವ ಹಣದ ಮೊತ್ತದಲ್ಲಿಯ ವ್ಯತ್ಯಾಸವನ್ನು ಅವರು ಬೆಟ್ಟುಮಾಡಿದ್ದಾರೆ.

‘ಮೋದಿ-ಚೋಕ್ಸಿ-ಮಲ್ಯ ಅವರಿಂದ 2,780.50 ಕೋ.ರೂ.ಗಳನ್ನು ಮರುವಸೂಲಿ ಮಾಡಲಾಗಿದೆ ಎಂದು ನೀವು(ಸೀತಾರಾಮನ್) ಟ್ವೀಟಿಸಿದ್ದೀರಿ. ಜಾರಿ ನಿರ್ದೇಶನಾಲಯವು ಐದು ವರ್ಷಗಳ ಅವಧಿಯಲ್ಲಿ ಪಿಎಂಎಲ್‌ಎ-ಫೆಮಾದಡಿ ಕೇವಲ 96.93 ಕೋ.ರೂ.ಗಳನ್ನು ಮರುವಸೂಲಿ ಮಾಡಿದೆ ಎಂದು 2020,ಮಾ.16ರಂದು ಸಂಸತ್ತಿಗೆ ತಿಳಿಸಲಾಗಿತ್ತು ’ಎಂದು ಸುರ್ಜೆವಾಲಾ ಟ್ವೀಟಿಸಿದ್ದಾರೆ.

ಆರ್‌ಬಿಐ ಮಂಗಳವಾರ ಭಾರತೀಯ ಬ್ಯಾಂಕುಗಳಿಗೆ ವಂಚಿಸಿರುವ ಆರೋಪಿಗಳಾದ 50 ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಬಳಿಕ ರಾಹುಲ್,ಅದರಲ್ಲಿ ಆಡಳಿತ ಪಕ್ಷದ ಆಪ್ತರ ಹೆಸರುಗಳಿರುವುದರಿಂದ ಬಿಜೆಪಿಯು ಪಟ್ಟಿಯನ್ನು ಸಂಸತ್ತಿನಿಂದ ಮರೆಮಾಚಿತ್ತು ಎಂದು ಆರೋಪಿಸಿದ್ದರು.

ಮೋದಿ-ಚೋಕ್ಸಿ-ಮಲ್ಯ ಸೇರಿದಂತೆ ಪಟ್ಟಿಯಲ್ಲಿರುವವರ 68,607 ಕೋ.ರೂ.ಸಾಲವನ್ನು ನರೇಂದ್ರ ಮೋದಿ ಸರಕಾರವು ಮನ್ನಾ ಮಾಡಿದೆ ಎನ್ನುವುದು ಕಾಂಗ್ರೆಸ್ ಮತ್ತು ರಾಹುಲ್ ಆರೋಪವಾಗಿದೆ.

2009-10ರಿಂದ 2013-14ರವರೆಗೆ ಯುಪಿಎ ಆಡಳಿತದ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು 1,45,226 ಕೋ.ರೂ.ಗಳ ಸಾಲಗಳನ್ನು ತಮ್ಮ ಲೆಕ್ಕದ ಪುಸ್ತಕಗಳಿಂದ ತೊಡೆದುಹಾಕಿದ್ದವು ಎಂದು ತನ್ನ ಟ್ವೀಟ್‌ನಲ್ಲಿ ಬೆಟ್ಟು ಮಾಡಿರುವ ಸೀತಾರಾಮನ್,ಅನುತ್ಪಾದಿತ ಆಸ್ತಿಗಳಿಗೆ ಸಂಬಂಧಿಸಿಂತೆ ಈ ಕ್ರಮವು ಆರ್‌ಬಿಐ ನಿಯಮಗಳಿಗೆ ಅನುಗುಣವಾಗಿದೆ ಮತ್ತು ಸಾಲಗಳನ್ನು ಲೆಕ್ಕದ ಪುಸ್ತಕಗಳಿಂದ ತೊಡೆದುಹಾಕಿದ್ದರೂ ಅವುಗಳ ಮರುವಸೂಲಿಗೆ ಬ್ಯಾಂಕುಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತವೆ ಎಂದು ತಿಳಿಸಿದ್ದಾರೆ.

ಯುಪಿಎದ ಫೋನ್ ಬ್ಯಾಂಕಿಂಗ್‌ನಿಂದ ಅದರೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದ ಉದ್ಯಮಿಗಳು ಲಾಭ ಮಾಡಿಕೊಂಡಿದ್ದರು ಎಂದು ಸೀತಾರಾಮನ್ ತಿರುಗೇಟು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು,ಇಂತಹ ನಿಯಮವನ್ನು ಉದ್ದೇಶಪೂರ್ವಕ ಸುಸ್ತಿದಾರರಿಗೆ ಅನ್ವಯಿಸುವುದನ್ನು ಯಾರೂ ನಿರಾಕರಿಸಲಾಗದು. ಆದರೆ ದೇಶದಿಂದ ಪರಾರಿಯಾಗಿರುವ ಮೋದಿ-ಚೋಕ್ಸಿ-ಮಲ್ಯ ಅವರಿಗೆ ನೀವು ಈ ನಿಯಮವನ್ನು ಅನ್ವಯಿಸಿರುವುದನ್ನು ನಾವು ಪ್ರಶ್ನಿಸುತ್ತಿದ್ದೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News