ಲಾಕ್ ಡೌನ್ 3.0: ಕೇಂದ್ರ ಸರಕಾರದ ಹೊಸ ನಿಯಮಾವಳಿಗಳ ಮಾಹಿತಿ ಇಲ್ಲಿದೆ

Update: 2020-05-01 15:07 GMT

ಹೊಸದಿಲ್ಲಿ: ಮೇ 4ರಂದು ಅಂತ್ಯಗೊಳ್ಳಲಿದ್ದ ಎರಡನೇ ಹಂತದ ಲಾಕ್ ಡೌನ್ ಅನ್ನು ಎರಡು ವಾರಗಳ ತನಕ ವಿಸ್ತರಿಸಿ ಆದೇಶ ಹೊರಡಿಸಿರುವ ಕೇಂದ್ರ ಸರಕಾರ ಜತೆಗೆ ಲಾಕ್ ಡೌನ್‍ನ ಹೊಸ ನಿಯಮಾವಳಿಗಳನ್ನೂ ಬಿಡುಗಡೆ ಮಾಡಿದೆ.  ಹೊಸ ನಿಯಮಾವಳಿಗಳು ಹಸಿರು ವಲಯ ಹಾಗೂ ಕಿತ್ತಳೆ ವಲಯಗಳಿಗೆ ಸಾಕಷ್ಟು ಸಡಿಲಿಕೆಗಳನ್ನು ನೀಡಿದೆ.

ಹೊಸ ನಿಯಮಾವಳಿಗಳ ಮಾಹಿತಿ ಇಂತಿದೆ.

1. ವಿವಿಧ ಜಿಲ್ಲೆಗಳ ಮುನಿಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ವಲಯ ಹಾಗೂ ವ್ಯಾಪ್ತಿಯ ಹೊರಗಿನ ವಲಯಗಳನ್ನು ವಿಂಗಡಿಸಲಾಗುವುದು. ಮುನಿಸಿಪಲ್ ವ್ಯಾಪ್ತಿಯ ಹೊರಗಿನ ವಲಯಗಳಲ್ಲಿ ಕಳೆದ 21 ದಿನಗಳಲ್ಲಿ ಯಾವುದೇ ಕೊರೋನ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲದೇ ಇದ್ದಲ್ಲಿ ಜಿಲ್ಲೆಯ ಒಟ್ಟಾರೆ ವಲಯಕ್ಕಿಂತ ಅದು ಒಂದು ಮಟ್ಟ ಕೆಳಗಿರಲಿದೆ.

2. ಕಂಟೈನ್ಮೆಂಟ್ ವಲಯಗಳನ್ನು ಆಯಾಯ ಜಿಲ್ಲಾಡಳಿತಗಳೇ ಅಲ್ಲಿನ ಸಕ್ರಿಯ ಸೋಂಕು ಪ್ರಕರಣಗಳನ್ನು, ಎಷ್ಟು ಪ್ರದೇಶದಲ್ಲಿ ಹರಡಿವೆ ಎಂಬುದರ ಆಧಾರದಲ್ಲಿ ನಿರ್ಧರಿಸಲಿವೆ. ಕಂಟೈನ್ಮೆಂಟ್ ವಲಯಗಳ ಶೇ. 100ರಷ್ಟು ನಿವಾಸಿಗಳು ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿದ್ದಾರೆಂಬ ಕುರಿತಂತೆ ಪ್ರಾಧಿಕಾರಗಳು ಖಾತರಿಪಡಿಸಬೇಕಿದೆ.

3. ವಲಯ ಯಾವುದೇ ಇದ್ದರೂ ದೇಶಾದ್ಯಂತ ಕೆಲ ಸೀಮಿತ ಚಟುವಟಿಕೆಗಳಿಗೆ ನಿರ್ಬಂಧವಿರುವುದು. ವಿಮಾನ, ರೈಲು, ಮೆಟ್ರೋ ಹಾಗೂ ರಸ್ತೆ ಮೂಲಕ ಅಂತರ-ರಾಜ್ಯ ಸಂಚಾರ, ಶಾಲೆಗಳು, ಕಾಲೇಜುಗಳು ಇತರ ಶೈಕ್ಷಣಿಕ, ಕೋಚಿಂಗ್ ಸಂಸ್ಥೆಗಳು, ಹೋಟೆಲುಗಳು, ರೆಸ್ಟಾರೆಂಟುಗಳು, ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಸ್ಥಳಗಳಾದ ಸಿನೆಮಾ ಮಂದಿರಗಳು, ಮಾಲ್‍ಗಳು, ಜಿಮ್, ಕ್ರೀಡಾ ಸಂಕೀರ್ಣಗಳು ಇತ್ಯಾದಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಇತರ ಸಮಾವೇಶಗಳು ಹಾಗೂ ಧಾರ್ಮಿಕ ಸ್ಥಳಗಳು, ಆರಾಧನಾಲಯಗಳು ಸಾರ್ವಜನಿಕರಿಗೆ ಬಂದ್ ಆಗಿರಲಿವೆ. ಆದರೆ ಕೆಲ ನಿರ್ದಿಷ್ಟ ಉದ್ದೇಶಗಳಿಗೆ ಹಾಗೂ ಸರಕಾರ ಅನುಮತಿ ನೀಡಿರುವಂತಹ ಉದ್ದೇಶಗಳಿಗೆ ಮಾತ್ರ ವಿಮಾನ, ರೈಲು ಮತ್ತು ರಸ್ತೆ ಸಂಚಾರವಿರುತ್ತದೆ.

4. ಅಗತ್ಯವಿಲ್ಲದ ಚಟುವಟಿಕೆಗಳಿಗೆ ಜನರ ಓಟಾಟ ಎಲ್ಲಾ ವಲಯಗಳಲ್ಲೂ ಸಂಜೆ 7ರಿಂದ ಬೆಳಗ್ಗೆ 7ರ ತನಕ ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಇದಕ್ಕಾಗಿ ಸ್ಥಳೀಯ ಅಧಿಕಾರಿಗಳು ಕಾನೂನಿನ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಮುಂತಾದ ಕ್ರಮಗಳನ್ನು ಕೈಗೊಳ್ಳಬಹುದು. ಎಲ್ಲಾ ವಲಯಗಳಲ್ಲೂ 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಆರೋಗ್ಯ ಸಮಸ್ಯೆಯಿರುವವರು. ಗರ್ಭಿಣಿಯರು ಹಾಗೂ 10 ವರ್ಷದ ಕೆಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕಿದ್ದು ಆರೋಗ್ಯ ಕಾರಣಗಳಿಗಾಗಿ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೂ ಹೊರಬರುವಂತಿಲ್ಲ. ಎಲ್ಲಾ ವಯಗಳಲ್ಲೂ ಒಪಿಡಿಗಳಿಗೆ ಅನುಮತಿಯಿದೆ.

5.ಕಂಟೈನ್ಮೆಂಟ್ ವಲಯಗಳ ಹೊರಗಿರುವ ಕೆಂಪು ವಲಯಗಳಲ್ಲಿ ದೇಶಾದ್ಯಂತ ನಿರ್ಬಂಧಿಸಿರುವ ಚಟುವಟಿಕೆಗಳ ಹೊರತಾಗಿ ಕೆಲ ಇತರ ಚಟುವಟಿಕೆಗಳೂ ನಿರ್ಬಂಧಿತವಾಗಿದ್ದು ಸೈಕಲ್ ರಿಕ್ಷಾ, ಆಟೋ ರಿಕ್ಷಾ, ಟ್ಯಾಕ್ಸಿ, ಕ್ಯಾಬ್, ಜಿಲ್ಲೆಯೊಳಗೆ ಹಾಗೂ ಅಂತರ-ಜಿಲ್ಲೆ ನಡುವೆ ಬಸ್ ಸಂಚಾರವಿರುವುದಿಲ್ಲ. ಜತೆಗೆ ಈ ಪ್ರದೇಶಗಳಲ್ಲಿ ಕ್ಷೌರದಂಗಡಿಗಳು, ಸ್ಪಾ ಮತ್ತು ಸೆಲೂನ್‍ಗಳಿಗೂ ಅನುಮತಿಯಿಲ್ಲ.

6. ಕೆಂಪು ವಲಯಗಳಲ್ಲಿ ಅನುಮತಿಯಿರುವ ಚಟುವಟಿಕೆಗಳಿಗೆ ಮಾತ್ರ ಜನರ ಹಾಗೂ ವಾಹನಗಳ ಓಡಾಟವಿರಲಿದ್ದು.   ಕಾರುಗಳಲ್ಲಿ ಚಾಲಕರ ಹೊರತಾಗಿ ಇಬ್ಬರು ಸಂಚರಿಸಬಹುದಾಗಿದ್ದು ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಸಂಚರಿಸುವಂತಿಲ್ಲ. ಆದರೆ ನಗರ ಪ್ರದೇಶಗಳ ವಿಶೇಷ ಆರ್ಥಿಕ ವಲಯಗಳಲ್ಲಿ ರಫ್ತು ಆಧರಿತ ಘಟಕಗಳು ಕೈಗಾರಿಕಾ ಎಸ್ಟೇಟ್‍ಗಳ ಕಾರ್ಯಾಚರಣೆಗೆ ಅನುಮತಿಯಿದೆ.

7. ಔಷಧಿಗಳು, ವೈದ್ಯಕೀಯ ಸಲಕರಣೆಗಳು, ಸಂಬಂಧಿತ ಕಚ್ಛಾ ವಸ್ತುಗಳ ಉತ್ಪಾದನಾ ಘಟಕ ಹಾಗೂ ಅವುಗಳಿಗೆ ಅಗತ್ಯ ವಸ್ತುಗಳ ಘಟಕಗಳು, ಐಟಿ ಹಾರ್ಡ್‍ವೇರ್, ಸೆಣಬು ಉದ್ಯಮ ಮುಂತಾದವುಗಳಿಗೆ ಅನುಮತಿಯಿದ್ದು, ಹಂತ ಹಂತದ ಶಿಫ್ಟ್ ಹಾಗೂ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

8. ಕಾರ್ಮಿಕರು ಸೈಟ್‍ನಲ್ಲೇ ಇರುವಂತಹ ಹಾಗೂ ಇತರೆಡೆಗಳಿಂದ ಕಾರ್ಮಿಕರನ್ನು ಕರೆತರುವ ಅವಶ್ಯಕತೆ ಇಲ್ಲದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಅನುಮತಿಸಲಾಗಿದೆ.

9. ಕೆಂಪು ವಲಯಗಳಲ್ಲಿ ಎಲ್ಲಾ ಕ್ಷೌರದಂಗಡಿಗಳನ್ನು ಹೊರತುಪಡಿಸಿ ವಾಣಿಜ್ಯ ಮತ್ತು ಖಾಸಗಿ ಮಳಿಗೆಗಳನ್ನು ತೆರೆಯಲು ಅನುಮತಿಯಿದೆ.

10. ಕಿತ್ತಳೆ ವಲಯಗಳಲ್ಲಿ ಕೆಂಪು ವಲಯಗಳಲ್ಲಿ ಅನುಮತಿಸಿದ ಕಾರ್ಯಚಟುವಟಿಕೆಗಳ ಹೊರತಾಗಿ ಟ್ಯಾಕ್ಸಿ ಮತ್ತು ಕ್ಯಾಬ್ ಗಳ ಸಂಚಾರಕ್ಕೆ ಅನುಮತಿಯಿದ್ದು ಚಾಲಕ ಹಾಗೂ ಒಬ್ಬ ಪ್ರಯಾಣಿಕ ಮಾತ್ರ ಪ್ರಯಾಣಿಸಬಹುದಾಗಿದೆ. ಹಸಿರು ವಲಯಗಳಲ್ಲಿ ಬಸ್ಸುಗಳ ಸಂಚಾರ ಕೂಡ ಆರಂಭಿಸಬಹುದಾಗಿದ್ದು ಶೇ. 50ರಷ್ಟು ಬಸ್ಸುಗಳು ಬಸ್ಸುಗಳ ಸಾಮಥ್ರ್ಯದ ಶೇ. 50 ರಷ್ಟು ಪ್ರಯಾಣಿಕರೊಂದಿಗೆ ಸಂಚರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News