ತೆಲಂಗಾಣದಿಂದ ಛತ್ತೀಸ್ ಗಢಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಗರ್ಭಿಣಿ: ಮಾರ್ಗಮಧ್ಯೆಯೇ ಹೆರಿಗೆ

Update: 2020-05-06 15:45 GMT

ಸಂಗಾರೆಡ್ಡಿ (ತೆಲಂಗಾಣ): ದೇಶವ್ಯಾಪಿ ಲಾಕ್‍ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಸಿಕ್ಕಿಹಾಕಿಕೊಂಡ ಮಹಿಳೆ ಛತ್ತೀಸ್ ಗಢಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದು, ಮಾರ್ಗಮಧ್ಯದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.

ಸಂಗಾರೆಡ್ಡಿ ಜಿಲ್ಲೆಯಿಂದ ಛತ್ತೀಸ್‍ಗಢದ ರಾಜನಂದಗಾಂವ್ ಗ್ರಾಮಕ್ಕೆ ಈ ಮಹಿಳೆ ಕುಟುಂಬದ ಜತೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಹೋಗುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಪತಿ ಹಾಗೂ ಜತೆಗೆ ಇದ್ದ ಇತರ ಮಹಿಳೆಯರ ನೆರವಿನಿಂದ ಹೆರಿಗೆಯಾಗಿದ್ದು, ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ನರಸಿಂಗಿ ತಾಲೂಕು ಶಿವನೂರು ಗ್ರಾಮದ ಬಳಿ ಮಹಿಳೆಗೆ ಪ್ರಸವವಾಗಿದೆ. ಈ ಘಟನೆ ತಿಳಿದ ಬಳಿಕ ಸ್ಥಳೀಯ ಪಿಎಸ್‍ಐ, ಈ ವಲಸೆ ಕಾರ್ಮಿಕರ ಕುಟುಂಬದ ನೆರವಿಗೆ ಬಂದಿದ್ದು, ಮಗು ಹಾಗೂ ತಾಯಿಯನ್ನು ರಾಯಂಪೇಟೆ ಆಸ್ಪತ್ರೆಗೆ ಖಾಸಗಿ ಆ್ಯಂಬುಲೆನ್ಸ್‍ನಲ್ಲಿ ಕರೆದೊಯ್ದು ಸೇರಿಸಿದ್ದಾರೆ.

ತಾಯಿ- ಮಗು ಆರೋಗ್ಯದಿಂದಿದ್ದು, ಉತ್ತಮ ಸೌಲಭ್ಯಕ್ಕಾಗಿ ಮೇಡಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈದರಾಬಾದ್‍ನಿಂದ ಸುಮಾರು 70 ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಬಂದಿದ್ದಾಗಿ ಪತಿ ಹೇಳಿದ್ದಾರೆ. ಈ ದಂಪತಿಗೆ ಈಗಾಗಲೇ ಮೂರು ವರ್ಷದ ಮಗ ಇದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News