30 ಬಿಎಸ್‌ಎಫ್ ಯೋಧರಿಗೆ ಕೊರೋನ ಪಾಸಿಟಿವ್

Update: 2020-05-06 17:17 GMT

ಹೊಸದಿಲ್ಲಿ, ಮೇ 6: ದಿಲ್ಲಿಯಲ್ಲಿ ಆಂತರಿಕ ಭದ್ರತಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ 30 ಮಂದಿ ಬಿಎಸ್‌ಎಫ್ ಯೋಧರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ಮಂಗಳವಾರ ದೃಢಪಟ್ಚಿದೆ.

ಈ ಯೋಧರು ಜೈಪುರದಿಂದ ಆಂತರಿಕ ಭದ್ರತಾ ಕರ್ತವ್ಯಕ್ಕಾಗಿ ಹಳೆದಿಲ್ಲಿಗೆ ಕಳುಹಿಸಲ್ಪಟ್ಟಿದ್ದ 65 ಸೈನಿಕರನ್ನೊಳಗೊಂಡ ಬಿಎಸ್‌ಎಫ್ ತುಕಡಿಯ ಭಾಗವಾಗಿದ್ದರು.

ಈ ಯೋಧರಲ್ಲಿ ಕೆಲವರಿಗೆ ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೋಮವಾರ ಇಡೀ ತುಕಡಿಯನ್ನು ವಿಮಾನದ ಮೂಲಕ ಜೋಧಪುರಕ್ಕೆ ಕರತರಲಾಗಿತ್ತು. ಮಂಗಳವಾರ ಅವರಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಜೈಪುರದ ಏಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು.ಆನಂತರ ಅವರನ್ನು ಜೈಪುರದಲ್ಲಿರುವ ಬಿಎಸ್‌ಎಫ್‌ನ ಪೂರಕ ತರಬೇತಿ ಕೇಂದ್ರ (ಎಸ್‌ಟಿಸಿ)ದಲ್ಲಿರಿಸಲಾಗಿತ್ತು. ಇಂದು ಬೆಳಿಗ್ಗೆ ಪರೀಕ್ಷಾ ವರದಿ ಬಂದಿದ್ದು, 30 ಮಂದಿಗೆ ಕೊರೋನ ವೈರಸ್ ಪಾಸಿಟಿವ್ ಬಂದಿದೆ ಎಂದು ಬಿಎಸ್‌ಎಫ್ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.

ಸೋಂಕಿಗೊಳಗಾದ ಎಲ್ಲಾ ಯೋಧರನ್ನು ಚಿಕಿತ್ಸೆಗಾಗಿ ಜೈಪುರದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಕಡಿಯ ಉಳಿದ ಯೋಧರನ್ನು ಎಸ್‌ಟಿಸಿ ಕಟ್ಟಡದಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗುವುದೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News