ಮನ್ರೇಗಾ ಯೋಜನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಶಿಕ್ಷಕರು, ಇಂಜಿನಿಯರ್!
ಹೈದರಾಬಾದ್,ಮೇ 21: ಕೈತುಂಬ ಸಂಬಳ ಪಡೆಯುವ ಶಿಕ್ಷಕರು, ಇಂಜಿನಿಯರ್‌ಗಳು ಕೊರೋನ ವೈರಸ್‌ನಿಂದಾಗಿ ಉಂಟಾಗಿರುವ ಸಮಸ್ಯೆಗೆ ತತ್ತರಿಸಿ ಹಳ್ಳಿಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಮನ್ರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಾ ದಿನದೂಡುತ್ತಿದ್ದಾರೆ.
ಚಿರಂಜೀವಿ ಹಾಗೂ ಅವರ ಪತ್ನಿ ಪದ್ಮಾ ಬೈಕ್ ಏರಿ ಬೆಳಗ್ಗೆಯೇ ಮನ್ರೇಗಾ ಕೆಲಸಕ್ಕೆ ಹೋಗುತ್ತಿದ್ದಾರೆ. ಚಿರಂಜೀವಿ ಸ್ನಾತಕೋತ್ತರ ಪದವೀಧರ ಹಾಗೂ ಬಿಎಡ್ ಡಿಗ್ರಿ ಪಡೆದಿದ್ದಾರೆ. 12 ವರ್ಷಗಳಿಂದ ಸೋಶಲ್ ಸ್ಟಡೀಸ್ ಟೀಚರ್ ಆಗಿದ್ದಾರೆ. ಪದ್ಮ ಎಂಬಿಎ ಪದವಿ ಪಡೆದಿದ್ದು ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದರು. ಈ ಇಬ್ಬರು ಈಗ ದಿನಗೂಲಿ ಕಾರ್ಮಿಕರಾಗಿ ಬದಲಾಗಿದ್ದು, ಕಳೆದ ಕೆಲವು ಸಮಯದಿಂದ ತಮ್ಮ ಹಳ್ಳಿಯ ಸಮೀಪ ಮನ್ರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರು ಕಳೆದ 2 ತಿಂಗಳುಗಳಿಂದ ಸಂಬಳವನ್ನೇ ಪಡೆದಿಲ್ಲ. ಕೊರೋನವೈರಸ್‌ನಿಂದ ಇನ್ನು ಯಾವಾಗ ಸಂಬಳ ಸಿಗುತ್ತದೆ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲವಾಗಿದೆ.
200ರಿಂದ 300 ರೂ. ಕನಿಷ್ಟ ಪಕ್ಷ ತರಕಾರಿ ಖರೀದಿಸಲು ನೆರವಾಗುತ್ತದೆ. ಸಂಬಳವಿಲ್ಲದೆ ಇಬ್ಬರು ಮಕ್ಕಳು, ತಂದೆತಾಯಿ ಇರುವ ಕುಟುಂಬವನ್ನು ನಿಭಾಯಿಸುವುದು ಕಷ್ಟಕರವಾಗಿದೆ ಎಂದು ಚಿರಂಜೀವಿ ಹೇಳುತ್ತಾರೆ.
ಕೊರೋನದ ಪರಿಣಾಮ ಪ್ರತಿ ವಲಯಕ್ಕೂ ತಟ್ಟಿದೆ. ಕಳೆದ 2-3 ತಿಂಗಳುಗಳಿಂದ ತೆಲಂಗಾಣದ 10,000 ಅನುದಾನಿತ ಹಾಗೂ 8000 ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಅಂದಾಜು 2 ಲಕ್ಷ ಶಿಕ್ಷಕರಿಗೆ ಸಂಬಳ ಪಾವತಿಸಲಾಗಿಲ್ಲ. ಕೆಲವು ಖಾಸಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಸಂಬಳ ಪಾವತಿಸಲು ಬಾಕಿ ಇಟ್ಟಿದ್ದಲ್ಲದೆ ಶಿಕ್ಷಕ,ಶಿಕ್ಷಕಿಯರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಶಾಲೆಗಳು ಮುಚ್ಚಿದ ಬಳಿಕ ಹೆಚ್ಚಿನ ಶಿಕ್ಷಕರು ಕಾರ್ಮಿಕರಾಗಿ ಬದಲಾಗುತ್ತಿದ್ದಾರೆ. ಶಾಲೆ ಯಾವಾಗ ಓಪನ್ ಆಗುತ್ತದೆ ಎಂದು ಯಾರಿಗೂ ಸ್ಪಷ್ಟತೆ ಇಲ್ಲವಾಗಿದೆ.
12 ವರ್ಷಗಳಿಂದ ಸಮಾಜ ವಿಜ್ಞಾನ ಶಿಕ್ಷಕನಾಗಿದ್ದ ನಾನೀಗ ಕೊರೋನದಿಂದಾಗಿ ಕೆಲಸ ಕಳೆದುಕೊಂಡಿದ್ದೇನೆ. ನನ್ನಂತೆಯೇ ಸಾವಿರಾರು ಯುವಕರು ಕೆಲಸ ಕಳೆದುಕೊಂಡಿದ್ದಾರೆ. ಉದ್ಯೋಗಸ್ಥ ಜನರಿಗೆ ನೆರವಾಗುವಂತೆ ಸರಕಾರಕ್ಕೆ ವಿನಂತಿಸುವೆ ಎಂದು ಚಿರಂಜೀವಿ ಹೇಳಿದ್ದಾರೆ.
ಉನ್ನತ ಶಿಕ್ಷಣ ಪಡೆದಿರುವ ಇನ್ನೂ ಕೆಲವರು ಮನ್ರೇಗಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಡಬಲ್ ಪಿಎಚ್‌ಡಿ ಪಡೆದಿರುವ ಶಿಕ್ಷಕ ರಮೇಶ್ ಹಾಗೂ ದೈಹಿಕಶಿಕ್ಷಣ ಶಿಕ್ಷಕರಾಗಿರುವ ಕೃಷ್ಣ ಅವರಿಗೆ ಬಿಸಿಲಲ್ಲಿ ಕೆಲಸ ಮಾಡುವುದು ಸುಲಭ ಸಾಧ್ಯವಲ್ಲ. ಕೆಲವೇ ತಿಂಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸ್ವಪ್ನಾ ಅವರು ಈಗ ಕೂಲಿ ಮಾಡುತ್ತಿದ್ದಾರೆ. ಒಂದುಲಕ್ಷ ಸಂಬಳ ಪಡೆಯುತ್ತಿದ್ದ ಸ್ವಪ್ನಾ ಸ್ವಲ್ಪ ಉಳಿತಾಯ ಮಾಡಿದ್ದರೂ ಮುಂದೆ ಉದ್ಯೋಗ ಸಿಗುವ ಖಾತ್ರಿ ಇಲ್ಲದೆ ಮನ್ರೇಗಾ ಯೋಜನೆಯಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದ್ದಾರೆ.