ಅಮಿತ್ ಶಾರಿಂದ ಮೋದಿ ಭೇಟಿ
ಹೊಸದಿಲ್ಲಿ, ಮೇ. 29: ನಾಲ್ಕನೆ ಹಂತದ ಲಾಕ್‌ಡೌನ್ ಶನಿವಾರ ಮುಕ್ತಾಯ ಗೊಳ್ಳಲಿರುವಂತೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಮೇ 31ರ ಆನಂತರವೂ ಲಾಕ್‌ಡೌನ್ ವಿಸ್ತರಿಸುವ ಬಗ್ಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ನೀಡಿರುವ ಸಲಹೆ ಹಾಗೂ ಅಭಿಪ್ರಾಯಗಳನ್ನು ಶಾ ಅವರು ಪ್ರಧಾನಿಗೆ ವಿವರಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾ ಅವರು ಗುರುವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಗೃಹ ಸಚಿವರು, ಮುಖ್ಯಮಂತ್ರಿಗಳ ಜೊತೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಮೇ 31ರ ಆನಂತರವೂ ಲಾಕ್‌ಡೌನ್ ವಿಸ್ತರಿಸಿದಲ್ಲಿ ಆಯಾ ರಾಜ್ಯಗಳಲ್ಲಿ ಯಾವ ವಲಯಗಳು ಹೆಚ್ಚು ಬಾಧಿತವಾಗಲಿವೆ ಹಾಗೂ ಯಾವ ವಲಯಗಳನ್ನು ತೆರೆಯಬೇಕಾಗಿದೆ ಎಂಬ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿ ದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್ ಬಳಿಕ ಮೊದಲ ಬಾರಿಗೆ
ಸಿಎಂಗಳ ಜೊತೆ ಶಾ ಸಂಭಾಷಣೆ
ಕುತೂಹಲಕರವೆಂದರೆ, ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್ ಅನ್ನು ಪ್ರತಿಹಂತದಲ್ಲೂ ವಿಸ್ತರಿಸುವ ಮುನ್ನ ಪ್ರಧಾನಿ ಮೋದಿ ಅವರೇ ಖುದ್ದಾಗಿ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾತುಕತೆ ನಡೆಸಿದ್ದರು. ಆದರೆ ಇದೇ ಮೊದಲ ಬಾರಿಗೆ ಅಮಿತ್ ಶಾ ಅವರು, ನಾಲ್ಕನೆ ಹಂತದ ಲಾಕ್‌ಡೌನ್ ಮುಕ್ತಾಯಕ್ಕೆ ಮುನ್ನ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ..
ಆದಾಗ್ಯೂ ಹಿಂದಿನ ಎಲ್ಲಾ ವಿಡಿಯೋಕಾನ್ಫರೆನ್ಸ್ ನಡೆದ ಸಂದರ್ಭಗಳಲ್ಲಿ ಪ್ರಧಾನಿ ಜೊತೆ ಅಮಿತ್ ಶಾ ಕೂಡಾ ಉಪಸ್ಥಿತರಿದ್ದರು.
ಅಮಿತ್‌ಶಾ ಜೊತೆ ದೂರವಾಣಿ ಮಾತುಕತೆಯಲ್ಲಿ ಬಹುತೇಕ ಮುಖ್ಯಮಂತ್ರಿಗಳು ಹೆಚ್ಚಿನ ವಿನಾಯಿತಿಗಳೊಂದಿಗೆ ಲಾಕ್‌ಡೌನ್ ಅನ್ನು ಮುಂದುವರಿಸುವುದಕ್ಕೆ ಒಲವು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಆರ್ಥಿಕ ಚಟುವಟಿಕೆಗಳನ್ನು ತೆರೆದಿಡುವುದನ್ನು ಮತ್ತು ಹಂತಹಂತವಾಗಿ ಸಾಮಾನ್ಯ ಜನಜೀವನವನ್ನು ಸಹಜ ಸ್ಥಿತಿಗೆ ತರಬೇಕಾಗಿದೆಯೆಂದು ಅಭಿಪ್ರಾಯಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.