“ನಾನು ಹೇಗೆ ಸಂಸ್ಕೃತ ಚೆನ್ನಾಗಿ ಕಲಿಯಬಲ್ಲೆ ಎಂದು ಶಿಕ್ಷಕರು ಒಮ್ಮೆ ಕೇಳಿದ್ದರು”
ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊಫೆಸರ್ ಸೊನಾಝರಿಯಾ ಮಿನ್ಝ್ ಅವರನ್ನು ಗುರುವಾರ ಜಾರ್ಖಂಡ್‍ನ ದುಮ್ಕ ಎಂಬಲ್ಲಿರುವ ಸಿಡೊ ಕನ್ಹು ಮುರ್ಮು ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ ನೇಮಿಸಲಾಗಿದೆ. ವಿವಿಯೊಂದರ ಮುಖ್ಯಸ್ಥೆಯಾಗಿ ಆದಿವಾಸಿ ಜನಾಂಗದ ಮಹಿಳೆಯೊಬ್ಬರು ನೇಮಕಗೊಂಡಿರುವ ನಿದರ್ಶನ ದೇಶದ ಇತಿಹಾಸದಲ್ಲಿ ವಿರಳವಾಗಿದೆ.
ಜಾರ್ಖಂಡ್‍ನ ಗುಮ್ಲ ಜಿಲ್ಲೆಯವರಾದ ಮಿನ್ಝ್ ಆದಿವಾಸಿ ಜನಾಂಗದ ವಿದ್ವಾಂಸೆಯಾಗಿದ್ದು ಜೆಎನ್‍ಯುವಿನ ಸ್ಕೂಲ್ ಆಫ್ ಕಂಪ್ಯೂಟರ್ ಎಂಡ್ ಸಿಸ್ಟಮ್ ಸಾಯನ್ಸಸ್ ಇಲ್ಲಿನ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರಲ್ಲದೆ ಜೆಎನ್‍ಯು ಶಿಕ್ಷಕರ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿರುವ ಅವರು ಸಾಮಾಜಿಕ ನ್ಯಾಯ, ದಲಿತ ಮತ್ತು ಆದಿವಾಸಿ ಹಕ್ಕುಗಳಿಗಾಗಿ ಹೋರಾಟ ನಡೆಸಿದವರಾಗಿದ್ದಾರೆ.
ಅವರನ್ನು ವಿಶ್ವವಿದ್ಯಾಲಯವೊಂದರ ಮುಖ್ಯಸ್ಥೆಯಾಗಿ ನೇಮಕ ಮಾಡಿರುವುದು ಶೈಕ್ಷಣಿಕ ವಲಯದಲ್ಲಿ ಖುಷಿ ಹಾಗೂ ಅಚ್ಚರಿಯನ್ನು ತಂದಿದೆ. ದೇಶದಲ್ಲಿ ಇರುವ 33,403 ಬುಡಕಟ್ಟು ಜನಾಂಗಗಳಿಗೆ ಸೇರಿದ ಶಿಕ್ಷಕರ ಪೈಕಿ ಕೇವಲ 13,574 ಮಂದಿ ಮಾತ್ರ ಮಹಿಳೆಯರಾಗಿದ್ದಾರೆ.
“ವಿಶ್ವವಿದ್ಯಾಲಯವೊಂದರ ಉಪಕುಲಪತಿಯಾಗಿರುವುದಕ್ಕೆ ಸಂತೋಷವಾಗಿದೆ, ಜೆಎನ್‍ಯುವಿನಲ್ಲಿ ಗಳಿಸಿದ ಅನುಭವವನ್ನು ಇಲ್ಲಿ ಬಳಸಬೇಕಿದೆ,''ಎನ್ನುವ ಅವರು ತಮಗೆ ಆದಿವಾಸಿ ಅಧ್ಯಯನ ಕೇಂದ್ರ ಸ್ಥಾಪಿಸುವ ಇರಾದೆಯಿದೆ ಎನ್ನುತ್ತಾರೆ.
ಶಾಲಾದಿನಗಳಲ್ಲಿ ತಾರತಮ್ಯ ಎದುರಿಸಿದ್ದ ಮಿನ್ಝ್:
ಮಿನ್ಝ್ ಅವರು ಇಂದು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಗಿ ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ರಾಂಚಿಯಲ್ಲಿ ಶಾಲೆಯಲ್ಲಿದ್ದಾಗ ಮೇಲ್ಜಾತಿಯ ಶಿಕ್ಷಕರಿಂದ ಸಾಕಷ್ಟು ತಾರತಮ್ಯ ಎದುರಿಸಿದ್ದನ್ನು ಅವರು ಸ್ಮರಿಸುತ್ತಾರೆ.
“ನಾನು ಹೇಗೆ ಸಂಸ್ಕೃತವನ್ನು ಚೆನ್ನಾಗಿ ಕಲಿಯಬಲ್ಲೆ ಎಂದು ನನ್ನ ಸಂಸ್ಕೃತ ಶಿಕ್ಷಕರು ಒಮ್ಮೆ ಪ್ರಶ್ನಿಸಿದ್ದರು. ಅದು ಆರ್ಯರ ಭಾಷೆ ಎಂದು ಹೇಳಿದ ಅವರು ನಾನೊಬ್ಬಳು ಆರ್ಯ ಆಗಿರಲಿಲ್ಲ ಎಂಬುದನ್ನು ಹೇಳಲು ಯತ್ನಿಸಿದ್ದರು,'' ಎಂದು ಮಿನ್ಝ್ ಹೇಳುತ್ತಾರೆ.
“ನೀನು ಮುಂದೆ ಗಣಿತ ವಿಷಯದಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ಬಯಾಲಜಿ ಆಯ್ಕೆ ಮಾಡು ಎಂದು ನನ್ನ ಗಣಿತ ಶಿಕ್ಷಕರು ಹೇಳುತ್ತಿದ್ದರು,'' ಎಂದೂ ಅವರು ನೆನಪಿಸಿಕೊಳ್ಳುತ್ತಾರೆ.
``ನನ್ನ ಇತರ ಸಹಪಾಠಿಗಳು ಕೇಳದೇ ಇರುವಂತಹ ಮಾತುಗಳನ್ನು ನಾನು ಕೇಳಬೇಕಿತ್ತು. ಚಿಕ್ಕವಳಿರುವಾಗ ನನ್ನನ್ನೇಕೆ ಈ ರೀತಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ತಿಳಿದಿರಲಿಲ್ಲ, ನಂತರ ನನಗೆ ಎಲ್ಲವೂ ತಿಳಿಯಿತು.,'' ಎಂದು ಅವರು ಹೇಳುತ್ತಾರೆ.
ಮುಂದೆ ಅವರ ಕುಟುಂಬ ರಾಂಚಿಯಿಂದ ದಕ್ಷಿಣ ಭಾರತಕ್ಕೆ ಬಂದು ನೆಲೆಸಿತ್ತು. “ನಮ್ಮ ಮುಖ ಹೆಚ್ಚಾಗಿ ದಕ್ಷಿಣ ಭಾರತೀಯರನ್ನು ಹೋಲುವಂತಿದ್ದರಿಂದ ಅಲ್ಲಿ ನಾವು ತಾರತಮ್ಯ ಎದುರಿಸಲಿಕ್ಕಿಲ್ಲ ಎಂದು ತಂದೆ ಅಂದುಕೊಂಡಿದ್ದರು. ನಾನು ಕಾಲೇಜು ಶಿಕ್ಷಣ ಆರಂಭಿಸುವುದಕ್ಕಿಂತ ಮುಂಚೆಯೇ ದಕ್ಷಿಣ ಭಾರತಕ್ಕೆ ಬಂದಿದ್ದೆವು,'' ಎಂದು ಅವರು ವಿವರಿಸುತ್ತಾರೆ.
ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ಮುಂದೆ ಎಂಫಿಲ್ ಪದವಿಗಾಗಿ 1986ರಲ್ಲಿ ಜೆಎನ್‍ಯು ಸೇರಿದರು. ಜೆಎನ್‍ಯು ಹೊರತಾಗಿ ಅವರು ಭೋಪಾಲ್‍ನ ಬರ್ಕತುಲ್ಲಾ ವಿವಿ ಹಾಗೂ ಮಧುರೈ ಕಾಮರಾಜ್ ವಿವಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.