ಶಿಕ್ಷಣಕ್ಕೆ ಕೂಡಿಟ್ಟಿದ್ದ 5 ಲಕ್ಷ ರೂ.ಗಳನ್ನು ಬಡವರಿಗೆ ನೀಡಿದ ಮಧುರೈನ ಸೆಲೂನ್ ಮಾಲಕನ ಪುತ್ರಿಗೆ ಜಾಗತಿಕ ಮನ್ನಣೆ

Update: 2020-06-06 08:37 GMT
Photo: twitter.com

ಚೆನ್ನೈ: ತನ್ನ ಶಿಕ್ಷಣಕ್ಕಾಗಿ ತಂದೆ ಕಷ್ಟಪಟ್ಟು ಉಳಿತಾಯ ಮಾಡಿದ್ದ 5 ಲಕ್ಷ ರೂ. ಹಣವನ್ನು ಲಾಕ್‍ಡೌನ್ ಸಂತ್ರಸ್ತರಿಗಾಗಿ  ಬಳಸಲು ತಂದೆಯನ್ನು ಒಪ್ಪಿಸಿದ ತಮಿಳುನಾಡಿನ ಮಧುರೈನ ಸೆಲೂನ್ ಮಾಲಕರೊಬ್ಬರ ಪುತ್ರಿ ಎಂ ನೇತ್ರಾ ಎಂಬಾಕೆಯನ್ನು  ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಸಂಘಟನೆ (ಯುಎನ್‍ಎಡಿಎಪಿ) ಇದರ ‘ಬಡವರ ಸೌಹಾರ್ದ ರಾಯಭಾರಿ’ಯಾಗಿ ನೇಮಿಸಲಾಗಿದೆ. 

ನ್ಯೂಯಾರ್ಕ್ ಹಾಗೂ ಜಿನೀವಾದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಮಾವೇಶಗಳಲ್ಲಿ ನೇತ್ರಾಗೆ ಭಾಷಣ ನೀಡಲು ಅವಕಾಶವೊದಗಿಸಲಾಗುವುದು ಎಂದು ಸಂಘಟನೆ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್‍ನಲ್ಲಿ  ನೇತ್ರಾ ಹಾಗೂ ಆಕೆಯ ತಂದೆ ಸಿ ಮೋಹನ್ ಅವರ ಗುಣಗಾನ ಮಾಡಿದ್ದರು. “ಮೋಹನ್ ಜಿ ಮಧುರೈನಲ್ಲಿ ಸೆಲೂನ್ ನಡೆಸುತ್ತಾರೆ. ಬಹಳ ಕಷ್ಟಪಟ್ಟು ಮಗಳ ಶಿಕ್ಷಣಕ್ಕಾಗಿ 5 ಲಕ್ಷ ರೂ. ಕೂಡಿಟ್ಟಿದ್ದರು. ಆದರೆ ಅವರು ಈ ಇಡೀ ಮೊತ್ತವನ್ನು ಲಾಕ್‍ಡೌನ್‍ನಿಂದ ಕಷ್ಟದಲ್ಲಿರುವವರಿಗೆ ವಿನಿಯೋಗಿಸಿದ್ದಾರೆ'' ಎಂದು ಮೋದಿ ಕಳೆದ ವಾರ ಹೇಳಿದ್ದರು.

ತಮಿಳುನಾಡು ಸಚಿವ ಸೆಲ್ಲೂರ್ ರಾಜು ಕೂಡ ನೇತ್ರಾಳನ್ನು ಕೊಂಡಾಡಿದ್ದಾರೆ ಹಾಗೂ ಮಾಜಿ ಸೀಎಂ ಜಯಲಲಿತಾ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಆಕೆಗೆ ಪ್ರದಾನ ಮಾಡುವಂತೆ ಮುಖ್ಯಮಂತ್ರಿಯನ್ನು ಕೇಳಿಕೊಳ್ಳುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News