ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ದಲಿತ ಬಾಲಕನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು: ಆರೋಪ
ಲಕ್ನೋ: ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ದೊಮ್ಖೇರ ಎಂಬ ಗ್ರಾಮದಲ್ಲಿ 17 ವರ್ಷದ ದಲಿತ ಬಾಲಕನಿಗೆ ಅಲ್ಲಿನ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದ ಮೇಲ್ಜಾತಿಯ ನಾಲ್ಕು ಮಂದಿ ಆತನನ್ನು ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.
ಮೃತ ಬಾಲಕನನ್ನು ವಿಕಾಸ್ ಜಾಟವ್ ಎಂದು ಗುರುತಿಸಲಾಗಿದೆ. ಆತ ದೇವಳ ಪ್ರವೇಶಿಸಲು ಯತ್ನಿಸುತ್ತಿದ್ದಂತೆಯೇ ಆರೋಪಿಗಳು ಆತನನ್ನು ತಡೆದಿದ್ದರು. ಇದಕ್ಕೆ ಬಾಲಕ ಆಕ್ಷೇಪ ಸೂಚಿಸಿ ಆರೋಪಿಗಳಾದ ಹೋರಂ ಚೌಹಾಣ್, ಭೂಷಣ್, ಜಸ್ವೀರ್ ಹಾಗೂ ಲಾಲಾ ಚೌಹಾಣ್ ಅವರೊಂದಿಗೆ ವಾದಕ್ಕಿಳಿದಿದ್ದ. ನಂತರ ಆತ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರೂ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲವೆನ್ನಲಾಗಿದೆ.
ಮೇ 31ರಂದು ತಡ ರಾತ್ರಿ ಯುವಕ ತನ್ನ ಮನೆಯಲ್ಲಿ ಮಲಗಿದ್ದಾಗ ಆರೋಪಿಗಳು ಆತನ ಮನೆಗೆ ನುಗ್ಗಿ ಆತನಿಗೆ ಗುಂಡಿಕ್ಕಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಕೂಡಲೇ ಆಸ್ಪತೆಗೆ ಸಾಗಿಸಲು ಯತ್ನಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಆತ ಸಾನವನಪ್ಪಿದ್ದ.
ಘಟನೆ ಸಂಬಂಧ ಪೊಲೀಶರು ಲಾಲಾ ಹಾಗೂ ಹೋರಂ ಎಂಬಿಬ್ಬರನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧ ಮುಂದುವರಿದಿದೆ. ಆರೋಪಿಗಳು ಹಾಗೂ ಯುವಕನ ನಡುವೆ ಹಣಕಾಸಿನ ವಿವಾದ ಕೂಡ ಇತ್ತು ಎಂದು ಪೊಲೀಸರು ಹೇಳಿದ್ದಾರೆ.