ಸಾಧುಗಳ ಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ಕೋರಿದ ಅರ್ಜಿ: ಮಹಾರಾಷ್ಟ್ರ, ಕೇಂದ್ರ ಸರಕಾರಗಳಿಗೆ ಸುಪ್ರೀಂ ನೋಟಿಸ್

Update: 2020-06-11 16:07 GMT

ಹೊಸದಿಲ್ಲಿ, ಜೂ.11: ಎಪ್ರಿಲ್‌ನಲ್ಲಿ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳು ಗುಂಪಿನ ಹಲ್ಲೆಯಿಂದ ಮೃತಪಟ್ಟ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ ಅರ್ಜಿಯ ಬಗ್ಗೆ ಎರಡು ವಾರದೊಳಗೆ ಪ್ರತಿಕ್ರಿಯಿಸುವಂತೆ ಮಹಾರಾಷ್ಟ್ರ ಸರಕಾರ, ಕೇಂದ್ರ ಸರಕಾರ ಮತ್ತು ಸಿಬಿಐಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಮಕ್ಕಳನ್ನು ಅಪಹರಿಸಿ ಅವರ ಕಿಡ್ನಿ ಮತ್ತಿತರ ಅಂಗಗಳನ್ನು ತೆಗೆಯುವ ಜಾಲ ಕಾರ್ಯಾಚರಿಸುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಎಪ್ರಿಲ್ 16ರಂದು ಪಾಲ್ಘಾರ್ ಜಿಲ್ಲೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾಧುಗಳು ಹಾಗೂ ಕಾರಿನ ಚಾಲಕನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಪ್ರಕರಣದ ಬಗ್ಗೆ ಮಹಾರಾಷ್ಟ್ರ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆ ವಿಶ್ವಾಸ ಇಲ್ಲವಾದ್ದರಿಂದ ಸಿಬಿಐಗೆ ತನಿಖೆಯನ್ನು ವಹಿಸಬೇಕೆಂದು ಕೋರಿ ಮೃತ ಸಾಧುಗಳ ಕುಟುಂಬದವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ಸಾಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದರೆ, ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ ತನಿಖೆ ಹಳಿ ತಪ್ಪಿದಂತೆ ಕಾಣುತ್ತದೆ. ಆದ್ದರಿಂದ ಕೇಂದ್ರ ತನಿಖಾ ಸಮಿತಿಯ ಸ್ವತಂತ್ರ ತನಿಖೆಯಿಂದ ಮಾತ್ರ ನ್ಯಾಯ ಸಿಗಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮಹಾರಾಷ್ಟ್ರ ಪೊಲೀಸರ ತನಿಖೆಯಲ್ಲಿ ಸಾಕ್ಷನಾಶದ ಸಾಧ್ಯತೆಯಿರುವುದರಿಂದ ಸಿಬಿಐ ತನಿಖೆ ಅಗತ್ಯ ಎಂದು ಮತ್ತೊಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ವಿಚಾರಣೆಯಲ್ಲಿ ಮಹಾರಾಷ್ಟ್ರ ಸರಕಾರ ಅರ್ಜಿಯನ್ನು ವಿರೋಧಿಸಿತು. ಇದೇ ರೀತಿಯ ಅರ್ಜಿಯ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿದೆ ಎಂದು ಸರಕಾರ ತಿಳಿಸಿತು. ಅರ್ಜಿಯ ಬಗ್ಗೆ ಎರಡು ವಾರದೊಳಗೆ ಉತ್ತರಿಸುವಂತೆ ಮಹಾರಾಷ್ಟ್ರ, ಕೇಂದ್ರ ಸರಕಾರ ಮತ್ತು ಸಿಬಿಐಗೆ ಸೂಚಿಸಿದ ನ್ಯಾ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News