ಕಾನೂನು ಉಲ್ಲಂಘಿಸಿಲ್ಲ: ಪತಂಜಲಿ ಹೇಳಿಕೆ

Update: 2020-06-26 15:04 GMT

ಡೆಹ್ರಾಡೂನ್, ಜೂ.26: ಕೊರೋನ ಸೋಂಕನ್ನು ಗುಣಪಡಿಸುವ ಔಷಧವನ್ನು ಬಿಡುಗಡೆಗೊಳಿಸಿರುವ ವಿಷಯದಲ್ಲಿ ಎಲ್ಲೆಡೆಯಿಂದ ಟೀಕಾಪ್ರಹಾರ ಎದುರಿಸಿದ ಯೋಗಗುರು ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದ ಸಂಸ್ಥೆ, ಈ ಪ್ರಕರಣದಲ್ಲಿ ತಾನು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ಗುರುವಾರ ಹೇಳಿಕೆ ನೀಡಿದೆ.

ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಸಾಂಪ್ರದಾಯಿಕ ಜ್ಞಾನ ಮತ್ತು ಅಶ್ವಗಂಧ, ತುಳಸಿ ಹಾಗೂ ಅಮೃತಬಳ್ಳಿಯ ಔಷಧೀಯ ಗುಣದ ಬಗ್ಗೆ ಇರುವ ಅನುಭವದಿಂದ ಔಷಧ ತಯಾರಿಸಲು ಲೈಸೆನ್ಸ್ ಪಡೆಯಲಾಗಿದೆ . ಅಲ್ಲದೆ ಕಾನೂನುಬದ್ಧವಾಗಿ ಕೊರೋನ ರೋಗಿಗಳ ಮೇಲೆ ಈ ಔಷಧದ ವೈದ್ಯಕೀಯ ಪ್ರಯೋಗ ನಡೆಸಿದ್ದು ಅದರ ಗುಣಾತ್ಮಕ ಫಲಿತಾಂಶವನ್ನು ಹಂಚಿಕೊಳ್ಳಲಾಗಿದೆ ಎಂದು ಪತಂಜಲಿ ಸಂಸ್ಥೆಯ ವಕ್ತಾರ ಎಸ್‌ಕೆ ತಿಜಾರಾವಾಲಾ ಹೇಳಿದ್ದಾರೆ. ಈ ಔಷಧದ ಉತ್ಪಾದನೆ ಮತ್ತು ಮಾರಾಟವನ್ನು ಸರಕಾರ ಸೂಚಿಸಿರುವ ನಿಯಮಕ್ಕೆ ಅನುಗುಣವಾಗಿಯೇ ನಡೆಸಲಾಗಿದೆಯೇ ವಿನಹ, ವೈಯಕ್ತಿಕ ನಂಬಿಕೆ ಅಥವಾ ಸಿದ್ಧಾಂತದ ಆಧಾರದಲ್ಲಿ ನಡೆಸಿಲ್ಲ. ಔಷಧದ ಲೇಬಲ್ ಮೇಲೆ ಯಾವುದೇ ಕಾನೂನುಬಾಹಿರ ಹಕ್ಕು ಸಾಧಿಸಿಲ್ಲ ಎಂದು ಸಂಸ್ಥೆ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ. ‘ಕೊರೊನಿಲ್ ’ ಎಂಬ ಔಷಧವನ್ನು ಮಂಗಳವಾರ ಬಿಡುಗಡೆ ಮಾಡಿದ್ದ ಹರಿದ್ವಾರ ಮೂಲದ ಪತಂಜಲಿ ಆಯುರ್ವೇದ ಸಂಸ್ಥೆ , ಇದು ಕೊರೋನ ಸೋಂಕಿಗೆ ಔಷಧ ಎಂದು ಹೇಳಿಕೊಂಡಿತ್ತು. ಈ ಔಷಧವನ್ನು ಪತಂಜಲಿ ಸಂಸ್ಥೆಯ ಮತ್ತೊಂದು ಔಷಧದ ಜೊತೆ ಸೇರಿಸಿದರೆ 7 ದಿನದೊಳಗೆ ಕೊರೋನ ರೋಗ ಗುಣವಾಗುತ್ತದೆ ಎಂಬುದು ವೈದ್ಯಕೀಯ ಪ್ರಯೋಗದಿಂದ ಸಾಬೀತಾಗಿದೆ ಎಂದು ಪತಂಜಲಿ ಹೇಳಿಕೊಂಡಿದೆ. ಸಂಸ್ಥೆಯ ಈ ಹೇಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಆಯುಷ್ ಇಲಾಖೆ , ಈ ಔಷಧವನ್ನು ಪರೀಕ್ಷೆ ನಡೆಸುವವರೆಗೆ ಅದರ ಬಗ್ಗೆ ಪ್ರಚಾರ ಮಾಡಬಾರದು ಎಂದು ಪತಂಜಲಿ ಸಂಸ್ಥೆಗೆ ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News