ವಿಶ್ವದ ಹಲವು ದೇಶಗಳಲ್ಲಿ ಹೆಚ್ಚುತ್ತಿರುವ ಕೊರೋನ ಸೋಂಕು, ಸಾವಿನ ಸಂಖ್ಯೆ

Update: 2021-04-09 04:14 GMT

ಹೊಸದಿಲ್ಲಿ : ವಿಶ್ವದ ಹಲವು ದೇಶಗಳಲ್ಲಿ ಗುರುವಾರ ಕೋವಿಡ್-19 ಸಾವು ಮತ್ತು ಹೊಸ ಸೋಂಕು ಪ್ರಕರಣಗಳಲ್ಲಿ ದಾಖಲೆ ಸೃಷ್ಟಿಯಾಗಿದೆ. ಸೋಂಕು ನಿಯಂತ್ರಣದಲ್ಲಿ ಈ ಹಿಂದೆ ಯಶಸ್ವಿಯಾಗಿದ್ದ ಹಲವು ದೇಶಗಳಲ್ಲೂ ದಿಢೀರನೇ ಪ್ರಕರಣಗಳು ಏರಿಕೆಯಾಗುತ್ತಿವೆ. ಅಮೆರಿಕದ ಮಿಚಿಗನ್‌ನಲ್ಲಿ ಸರಾಸರಿ 7 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ.

ಅಮೆರಿಕ ಮತ್ತು ಪೆರು ಬಳಿಕ ಇದೀಗ ಬ್ರೆಝಿಲ್‌ನಲ್ಲಿ ಒಂದೇ ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆ ಸಂಖ್ಯೆಯ ಅಂದರೆ 1.27 ಲಕ್ಷ ಹೊಸ ಕೊರೋನ ಪ್ರಕರಣಗಳು ವರದಿಯಾಗಿವೆ. ಇರಾನ್‌ನಲ್ಲಿ ಸತತ ಮೂರನೇ ದಿನ ದಾಖಲೆ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದು, ಗುರುವಾರ 22,600 ಪ್ರಕರಗಳು ವರದಿಯಾಗಿವೆ.

ಭಾರತದಲ್ಲಿ ಇದುವರೆಗೆ ಒಂಬತ್ತು ಕೋಟಿ ಮಂದಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದ್ದು, 1.1 ಕೋಟಿ ಮಂದಿಗೆ ಎರಡೂ ಡೋಸ್ ನೀಡಲಾಗಿದೆ. ಆದರೆ 140 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇದು ಅಲ್ಪಪ್ರಮಾಣವಾಗಿದೆ. ಬ್ರೆಝಿಲ್‌ನಲ್ಲಿ 21 ಕೋಟಿ ಮಂದಿಯ ಪೈಕಿ ಶೇಕಡ 3ರಷ್ಟು ಮಂದಿಗೆ ಮಾತ್ರ ಲಸಿಕೆ ಲಭ್ಯವಾಗಿದೆ.

ದಕ್ಷಿಣ ಕೊರಿಯಾದಲ್ಲಿ 700 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ಇದು ಜನವರಿ 5ರ ಬಳಿ ಅತ್ಯಧಿಕ ಸಂಖ್ಯೆಯಾಗಿದೆ. ಇದುವರೆಗೆ ಕೇವಲ 95 ಮಂದಿ ಸೋಂಕಿತರು ಮೃತಪಟ್ಟಿರುವ ಥಾಯ್ಲೆಂಡ್‌ನಲ್ಲಿ ಬ್ರಿಟನ್‌ನಲ್ಲಿ ಪತ್ತೆಯಾಗಿದ್ದ ಹೊಸ ಪ್ರಬೇಧದ ಕೊರೋನ ಪ್ರಕರಣ ಪತ್ತೆಯಾಗಿದೆ.

ಅಮೆರಿಕದ ಹಲವು ರಾಜ್ಯಗಳಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನ್ಯೂಯಾರ್ಕ್ ಹೊರತುಪಡಿಸಿದರೆ ಮಿಚಿಗನ್‌ನಲ್ಲಿ ದೇಶದಲ್ಲೇ ಗರಿಷ್ಠ ಪ್ರಕರಣಗಳು ವರದಿಯಾಗುತ್ತಿದೆ. ದೇಶದ ಪ್ರತಿ 203 ಮಂದಿಯ ಪೈಕಿ ಒಬ್ಬರಿಗೆ ಮಾರ್ಚ್ 31- ಎಪ್ರಿಲ್ 7ರ ಅವಧಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಾನ್ ಹಾಕಿನ್ಸ್ ವಿವಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News