ಕೋವಿಡ್ ಹಿನ್ನೆಲೆ: ಕುಂಭಮೇಳ ಸಮಾಪ್ತಿ ಘೋಷಣೆ
ಹರಿದ್ವಾರ, ಎ.16: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಪ್ರಿಲ್ 17ರಂದು ಶನಿವಾರ ಕುಂಭ ಮೇಳ ಸಮಾಪ್ತಿಯಾಗಲಿದೆ ಎಂದು 12 ಅಖಾಡಾಗಳಲ್ಲಿ ಒಂದಾಗಿರುವ ಪಂಚಯತಿ ನಿರಂಜನಿ ಅಖಾಡಾ ಘೋಷಿಸಿದೆ.
"ಹರಿದ್ವಾರದಲ್ಲಿ ಕೋವಿಡ್-19 ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಎಪ್ರಿಲ್ 17ರಂದೇ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ" ಎಂದು ನಿರಂಜನಿ ಅಖಾಡಾ ಕಾರ್ಯದರ್ಶಿ ರವೀಂದ್ರಪುರಿ ಮಹಾರಾಜ್ ಹೇಳಿಕೆ ನೀಡಿದ್ದಾರೆ.
"ಎಪ್ರಿಲ್ 27ರ ಶಹಿ ಸ್ನಾನದ ಬಗ್ಗೆ ಅಖಾಡಾ ಪರಿಷತ್‌ನ ನಿರ್ಧಾರದಂತೆ ಕ್ರಮ ಕೈಗೊಳ್ಳಲಾಗುವುದು. ನಾಲ್ಕನೇ ಶಹಿ ಸ್ನಾನದಲ್ಲಿ ಕೆಲವು ಮಂದಿ ಸಾಧುಗಳು ಭಾಗವಹಿಸಲಿದ್ದಾರೆ" ಎಂದು ಮಹಾರಾಜ್ ವಿವರ ನೀಡಿದರು.
ಪ್ರಸಕ್ತ ಸನ್ನಿವೇಶದಲ್ಲಿ ಹರಿದ್ವಾರದಲ್ಲಿ ಜನದಟ್ಟಣೆ ಸೇರುವುದು ಸೂಕ್ತವಲ್ಲ. ನಮ್ಮ ಹಲವು ಮಂದಿ ಸಿಬ್ಬಂದಿ ಹಾಗೂ ಸಾಧುಗಳು ಅಸ್ವಸ್ಥರಾಗಿದ್ದಾರೆ" ಎಂದು ಮಹಾಮಂಡಲೇಶ್ವರ ಆಚಾರ್ಯ ಕೈಲಾಶ್‌ಗಿರಿ ಹೇಳಿದ್ದಾರೆ. ಕುಂಭ ಮೇಳ ನಡೆಯುತ್ತಿರುವ ಹರಿದ್ವಾರದಲ್ಲಿ ಕಳೆದ ಐದು ದಿನಗಳಲ್ಲಿ 2,167 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.