"ಶಾರುಕ್ ಖಾನ್ ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ಸಮಿತಿಯ ಭಾಗವಾಗಲು ಸಿಜೆಐ ಬೋಬ್ಡೆ ಬಯಸಿದ್ದರು"
ಹೊಸದಿಲ್ಲಿ, ಎ. 23: ಅಯೋಧ್ಯೆ ವಿವಾದ ಪರಿಹರಿಸಲು ಸುಪ್ರೀಂ ಕೋರ್ಟ್ 2019 ಮಾರ್ಚ್ನಲ್ಲಿ ರೂಪಿಸಿದ ಮಧ್ಯಸ್ಥಿಕೆ ಸಮಿತಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಭಾಗಾವಾಗಲು ಈಗ ನಿವೃತ್ತಿಯಾಗುತ್ತಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಬಯಸಿದ್ದರು. ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಹಿರಿಯ ವಕೀಲ ಹಾಗೂ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿಕಾಸ್ ಸಿಂಗ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
‘‘ಅವರು ಅಯೋಧ್ಯೆ ವಿವಾದದ ವಿಚಾರಣೆಯ ಆರಂಭಿಕ ಹಂತದಲ್ಲಿದ್ದರು. ಮಧ್ಯಸ್ಥಿಕೆ ಮೂಲಕ ಮಾತ್ರವೇ ಈ ಸಮಸ್ಯೆ ಪರಿಹರಿಸಬಹುದು ಎಂಬ ಸ್ಪಷ್ಟ ನಿಲುವನ್ನು ಅವರು ಹೊಂದಿದ್ದರು. ಶಾರುಕ್ ಖಾನ್ ಸಮಿತಿಯ ಭಾಗವಾಗಲು ಸಾಧ್ಯವೇ ಎಂದು ಅವರು ನನ್ನಲ್ಲಿ ಕೇಳಿದ್ದರು. ನಾನು ಶಾರುಕ್ ಖಾನ್ ಅವರಲ್ಲಿ ವಿಚಾರಿಸಿದ್ದೆ. ಅದಕ್ಕೆ ಶಾರುಕ್ ಖಾನ್ ಒಪ್ಪಿಕೊಂಡಿದ್ದರು. ಆದರೆ, ದುರಾದೃಷ್ಟವೆಂದರೆ ಅದು ಕಾರ್ಯಗತವಾಗಲಿಲ್ಲ’’ ಎಂದು ಸಿಂಗ್ ಹೇಳಿದ್ದಾರೆ.
ಕೋಮು ಸಂಘರ್ಷವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸುಲು ಮುಖ್ಯ ನ್ಯಾಯಮೂರ್ತಿ ಅವರ ಬಯಕೆ ಗಮನಾರ್ಹ ಎಂದು ಸಿಂಗ್ ಹೇಳಿದ್ದಾರೆ. ರಾಮಮಂದಿರ-ಬಾಬರಿ ಮಸೀದಿ ವಿವಾದದ ಕುರಿತು ಚಾರಿತ್ರಿಕ ತೀರ್ಪು ನೀಡಿದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿ ಬೊಬ್ಡೆ ಭಾಗವಾಗಿದ್ದರು. ಸುಪ್ರೀಂ ಕೋರ್ಟ್ ಪೀಠ 2019 ಮಾರ್ಚ್ ನಲ್ಲಿ ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಎಫ್ಎಂಐ ಕಲಿಫುಲ್ಲಾ, ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್ ಹಾಗೂ ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು ಅವರನ್ನು ಒಳಗೊಂಡ ಮಧ್ಯಸ್ಥಿಕೆ ಸಮಿತಿಗೆ ಒಪ್ಪಿಸಿತ್ತು.
ಆದರೆ, ಮಧ್ಯಸ್ಥಿಕೆ ಫಲ ನೀಡಲಿಲ್ಲ. ಆದುದರಿಂದ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು 2019 ಆಗಸ್ಟ್ 6ರಿಂದ 40 ದಿನಗಳ ಕಾಲ ನಡೆಸಿತ್ತು. ಅಲ್ಲದೆ, 2019 ಅಕ್ಟೋಬರ್ 16ರಂದು ತೀರ್ಪು ಕಾದಿರಿಸಿತ್ತು. ಅನಂತರ 2019 ನವೆಂಬರ್ 9ರಂದು ತೀರ್ಪು ಘೋಷಿಸಿತು.