‘ಆಂಧ್ರ ಸಿಎಂ ಜಾಮೀನು ರದ್ದುಮಾಡಿ' ಎಂದು ಆಗ್ರಹಿಸಿದ ಸಂಸದನ ಬಂಧನ

Update: 2021-05-14 17:17 GMT
photo: twitter

 ಹೈದರಾಬಾದ್: ನರಸಪುರಂ ಸಂಸದ ಕನುಮುರಿ ರಘುರಾಮ ಕೃಷ್ಣಂ ರಾಜು ಅವರನ್ನು ಆಂಧ್ರಪ್ರದೇಶದ ಅಪರಾಧ ಪತ್ತೆ ವಿಭಾಗ (ಸಿಐಡಿ) ದೇಶದ್ರೋಹ ಪ್ರಕರಣ ದಾಖಲಿಸಿ  ಬಂಧಿಸಿದೆ.

ಬಂಡಾಯ ಎದ್ದಿರುವ ವೈಎಸ್ಆರ್ ಕಾಂಗ್ರೆಸ್ ಮುಖಂಡ ಕೃಷ್ಣ ರಾಜು  ತಮ್ಮ ಪಕ್ಷದ ಸಂಸ್ಥಾಪಕ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯವನ್ನು ಕೋರಿದ್ದರು.

ರಾಜ್ಯ ಸರಕಾರದ ಪ್ರತಿಷ್ಠೆಗೆ ಹಾನಿಕಾರಕ ರೀತಿಯಲ್ಲಿ ವರ್ತಿಸಿದ ಆರೋಪದ ಮೇಲೆ ರಾಜು ಅವರನ್ನು ಹೈದರಾಬಾದ್ ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

 59 ವರ್ಷದ ಸಂಸದ ರಾಜು,  ರೆಡ್ಡಿ ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪ  ಹೊರಿಸಿದ್ದಾರೆ.

ರಾಜು ವಿರುದ್ದ ಸೆಕ್ಷನ್ 124 ಎ (ದೇಶದ್ರೋಹ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಹಾಗೂ  505 (ಸಾರ್ವಜನಿಕ ಕಿಡಿಗೇಡಿತನವನ್ನು ಸೃಷ್ಟಿಸುವುದು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ರಾಜು ಕೆಲವು ಸಮುದಾಯಗಳ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡುತ್ತಿದ್ದಾರೆ ಹಾಗೂ  ಸರಕಾರದ ವಿರುದ್ಧ ಅಸಮಾಧಾನವನ್ನು ಉತ್ತೇಜಿಸುತ್ತಿದ್ದಾರೆ ಎಂದು ಮಾಹಿತಿ ಲಭಿಸಿತ್ತು  ಎಂದು ಬಂಧನದ ನಂತರ ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಎಪ್ರಿಲ್ 27 ರಂದು ಸಿಬಿಐ ವಿಶೇಷ ನ್ಯಾಯಾಲಯವನ್ನು  ರಾಜು ಕೋರಿದ್ದರು. ಮುಖ್ಯಮಂತ್ರಿ ಜಾಮೀನು ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News