ಜಗತ್ತು ಲಸಿಕೆ ಭೇದನೀತಿಯ ಅಪಾಯದಲ್ಲಿ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಂದ ಎಚ್ಚರಿಕೆ
ಪ್ಯಾರಿಸ್ (ಫ್ರಾನ್ಸ್), ಮೇ 18: ಶ್ರೀಮಂತ ಮತ್ತು ಬಡ ದೇಶಗಳಲ್ಲಿ ಕೊರೋನ ವೈರಸ್ ಲಸಿಕೆಗಳನ್ನು ಪಡೆದವರ ಸಂಖ್ಯೆಯಲ್ಲಿ ಅಜಗಜಾಂತರವಿದ್ದು, ಜಗತ್ತು ಲಸಿಕೆ ಭೇದನೀತಿಗೆ ಒಳಪಡುವ ಅಪಾಯದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಸೋಮವಾರ ಹೇಳಿದ್ದಾರೆ.
ನಾನು ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆನಿಸುತ್ತದೆ: ಜಗತ್ತು ಲಸಿಕೆ ಭೇದನೀತಿಗೆ ಒಳಗಾಗುವ ಅಪಾಯದಲ್ಲಿ ಅಷ್ಟೇ ಇಲ್ಲ, ವಾಸ್ತವವಾಗಿ ಜಗತ್ತು ಲಸಿಕೆಭೇದ ನೀತಿಯಲ್ಲೇ ಇದೆ ಎಂದು ಪ್ಯಾರಿಸ್ ಪೀಸ್ ಫೋರಮ್ ಸ್ಪ್ರಿಂಗ್ ಸಭೆಯಲ್ಲಿ ಮಾತನಾಡಿದ ಅವರು ಹೇಳಿದರು.
ನಿಮಗೆ ಗೊತ್ತಿರುವಂತೆ, ಶ್ರೀಮಂತ ದೇಶಗಳಲ್ಲಿ ಜಗತ್ತಿನ ಜನಸಂಖ್ಯೆಯ 15 ಶೇಕಡದಷ್ಟಿದ್ದಾರೆ. ಆದರೆ ಆ ದೇಶಗಳಲ್ಲಿ ಜಗತ್ತಿನ ಲಸಿಕೆಗಳ 45 ಶೇಕಡದಷ್ಟಿವೆ. ಕೆಳ-ಮಧ್ಯಮ ಆದಾಯದ ದೇಶಗಳು ಮತ್ತು ಬಡ ದೇಶಗಳಲ್ಲಿ ಜಗತ್ತಿನ ಜನಸಂಖ್ಯೆಯ ಸುಮಾರು ಅರ್ಧದಷ್ಟಿದ್ದಾರೆ. ಆದರೆ, ಅವುಗಳಿಗೆ ಜಗತ್ತಿನ ಲಸಿಕೆಗಳ 17 ಶೇಕಡದಷ್ಟು ಮಾತ್ರ ತಲುಪಿವೆ. ಹಾಗಾಗಿ, ಅಂತರವು ಅಗಾಧವಾಗಿದೆ ಎಂದು ಗೇಬ್ರಿಯೇಸಸ್ ಹೇಳಿದರು.