ಗುರುತು ಚೀಟಿ ಇಲ್ಲದವರನ್ನು ಏನು ಮಾಡುತ್ತೀರಿ?: ಲಸಿಕೆ ಕುರಿತು ಕೇಂದ್ರ,ರಾಜ್ಯಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ

Update: 2021-06-09 15:49 GMT

ಮುಂಬೈ, ಜೂ. 10: ಲಸಿಕೆಯ ಉದ್ದೇಶಕ್ಕಾಗಿ ಸೂಚಿಸಲಾದ 7 ಗುರುತು ಪತ್ರಗಳಲ್ಲಿ ಒಂದೂ ಇರದ ವ್ಯಕ್ತಿಗಳಿಗೆ ಕೋವಿಡ್-ಲಸಿಕೆ ನೀಡುವ ಕೇಂದ್ರದ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ (ಎಸ್ಒಪಿ)ದ ಕುರಿತು ಪ್ರಜೆಗಳಿಗೆ ಮಾಹಿತಿ ನೀಡಲು ಯಾವ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಬಾಂಬೆ ಉಚ್ಚ ನ್ಯಾಯಾಲಯ ಮಹಾರಾಷ್ಟ್ರ ಹಾಗೂ ಕೇಂದ್ರ ಸರಕಾರವನ್ನು ಬುಧವಾರ ಪ್ರಶ್ನಿಸಿದೆ.

 
ಮಾನಸಿಕ ಅಸ್ವಸ್ಥರು, ಕಾನೂನಾತ್ಮಕ ಪಾಲಕರು ಇಲ್ಲದವರು ಹಾಗೂ ಲಸಿಕೆ ಸ್ವೀಕರಿಸಲು ಒಪ್ಪಿಗೆ ನೀಡುವ ಸ್ಥಿತಿಯಲ್ಲಿ ಇಲ್ಲದ ವ್ಯಕ್ತಿಗಳನ್ನು ತನ್ನ ಲಸಿಕೆ ಅಭಿಯಾನದ ಅಡಿಯಲ್ಲಿ ಸೇರಿಸಲು ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಮುಖ್ಯ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಜಿ.ಎಸ್. ಕುಲಕರ್ಣಿ ಅವರಿದ್ದ ನ್ಯಾಯಪೀಠ ತಿಳಿಸಿದೆ. 

ಪ್ರಜೆಗಳಿಗೆ ಕೋವಿಡ್-19 ಲಸಿಕೆಯ ಲಭ್ಯತೆಯ ಖಾತರಿ, ಕೋವಿನ್ ಪೋರ್ಟಲ್ ಕಾರ್ಯಾಚರಣೆಯ ಸುಧಾರಣೆ ಹಾಗೂ ಇತರ ವಿಷಯಗಳ ಕುರಿತ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಗುಚ್ಛವನ್ನು ನ್ಯಾಯಪೀಠ ವಿಚಾರಣೆ ನಡೆಸಿತು. ಕೋವಿನ್ ಪೋರ್ಟಲ್ನಲ್ಲಿ ಲಸಿಕೆಗೆ ನೋಂದಣಿ ಮಾಡಲು ಪ್ರಜೆಗಳಿಗೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಸೇರಿದಂತೆ 7 ಅಧೀಕೃತ ಗುರುತು ಚೀಟಿಯ ಪಟ್ಟಿಯನ್ನು ಕೇಂದ್ರ ಸರಕಾರ ಸೂಚಿಸಿದೆ ಎಂದು ದೂರುದಾರರು ನ್ಯಾಯಪೀಠಕ್ಕೆ ತಿಳಿಸಿದರು. 

ಈ 7 ಗುರುತು ಪತ್ರಗಳಲ್ಲಿ ಯಾವುದೂ ಇಲ್ಲದ ವ್ಯಕ್ತಿಗಳಿಗೆ ಕೇಂದ್ರ ಸರಕಾರ ವಿವರವಾದ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ (ಎಸ್ಒಪಿ) ಜಾರಿಗೊಳಿಸಿದೆ. ಅಂತಹ ವ್ಯಕ್ತಿಗಳನ್ನು ಗುರುತಿಸುವ ಹಾಗೂ ಅವರಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ, ಇದರ ಹೊರತಾಗಿಯೂ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ (ಎಸ್ಒಪಿ) ಯಾರಿಗೂ ತಿಳಿದಿಲ್ಲ ಎಂದು ದೂರುದಾರರು ಹೇಳಿದ್ದಾರೆ. 

ಲಸಿಕೆ ಅಭಿಯಾನದ ಹೊರತಾಗಿಯೂ ಹಲವು ಜನರು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಇರುವವರು ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಅವರು ಹೇಳಿದರು. ಕೇಂದ್ರ ಸರಕಾರದ ಪರ ವಕೀಲ, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಅನಿಲ್ ಸಿಂಗ್ ಈ ಪ್ರತಿಪಾದನೆಗೆ ವಿರೋಧ ವ್ಯಕ್ತಪಡಿಸಿದರು. 

ಈ ಹಿಂದೆ ಲಸಿಕೆಯನ್ನು ವಿರೋಧಿಸಿ ಸಾರ್ವಜನಿಕ ಹೇಳಿಕೆ ನೀಡಿದವರು, ಈಗ ಲಸಿಕೆ ತೆಗೆದುಕೊಂಡಿದ್ದಾರೆ ಎಂದರು. ಈ ಸಂದರ್ಭ ನ್ಯಾಯಪೀಠ, ಕೇಂದ್ರ ಸರಕಾರ ಲಸಿಕೆ ಹಾಗೂ ಅದರ ಹಲವು ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ (ಎಸ್ಒಪಿ)ದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News