ಗುಜರಾತ್ ಬಂದರಿನಲ್ಲಿ ಭಾರೀ ಡ್ರಗ್ ಪತ್ತೆ ಹಿನ್ನೆಲೆ:ಅಫ್ಘಾನ್, ಪಾಕ್ ಸರಕು ನಿರ್ವಹಿಸದಿರಲು ಅದಾನಿ ಕಂಪೆನಿ ನಿರ್ಧಾರ

Update: 2021-10-11 15:06 GMT

ಹೊಸದಿಲ್ಲಿ: ತಾನು ನಡೆಸುತ್ತಿರುವ ಟರ್ಮಿನಲ್ ಗಳಲ್ಲಿ  ಇರಾನ್, ಅಫ್ಘಾನಿಸ್ತಾನ ಹಾಗೂ  ಪಾಕಿಸ್ತಾನದಿಂದ ಬರುವ ಸರಕುಗಳನ್ನು ನವೆಂಬರ್ 15 ರಿಂದ ನಿರ್ವಹಿಸುವುದಿಲ್ಲ ಎಂದು ಅದಾನಿ ಕಂಪೆನಿ ಸೋಮವಾರ ತಿಳಿಸಿದೆ ಎಂದು NDTV ವರದಿ ಮಾಡಿದೆ.

ಇತ್ತೀಚೆಗೆ ಗುಜರಾತ್‌ನ ಅದಾನಿ ಬಂದರಿನಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ಸಾಗಣೆಯು ಪತ್ತೆಯಾದ ನಂತರ ಅದಾನಿ ಕಂಪೆನಿ ಈ ಹೆಜ್ಜೆ ಇಟ್ಟಿದೆ.

 "ನವೆಂಬರ್ 15 ರಿಂದ ಜಾರಿಗೆ ಬರುವಂತೆ ಎಪಿಎಸ್ ಇಝೆಡ್  ಇರಾನ್, ಪಾಕಿಸ್ತಾನ ಹಾಗೂ  ಅಫ್ಘಾನಿಸ್ತಾನದ ಮೂಲಕ ಎಕ್ಸಿಮ್ (ರಫ್ತು-ಆಮದು) ಕಂಟೇನೆರ್  ಸರಕುಗಳನ್ನು ನಿರ್ವಹಿಸುವುದಿಲ್ಲ" ಎಂದು ಅದಾನಿ ಸಮೂಹ ಹೇಳಿಕೆಯಲ್ಲಿ ತಿಳಿಸಿದೆ. ಈ ಈ ಸೂಚನೆಯು  ಎಪಿಎಸ್‌ಇಝೆಡ್‌ನಿಂದ ನಿರ್ವಹಿಸಲ್ಪಡುವ ಎಲ್ಲಾ ಟರ್ಮಿನಲ್‌ಗಳಿಗೂ ಮುಂದಿನ ಸೂಚನೆ ಬರುವವರೆಗೂ ಅನ್ವಯಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ 13 ರಂದು ಅದಾನಿ ಸಮೂಹ ನಡೆಸುತ್ತಿರುವ ಗುಜರಾತ್‌ನ ಮುಂಡ್ರಾ ಬಂದರಿನಲ್ಲಿ ಎರಡು ಕಂಟೇನರ್‌ಗಳಿಂದ ಸುಮಾರು 3,000 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ಕಸ್ಟಮ್ಸ್ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯದ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದು ಸುಮಾರು  20,000 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News