ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅರುಣಾಚಲ ಪ್ರದೇಶ ಭೇಟಿಗೆ ಆಕ್ಷೇಪಿಸಿದ ಚೀನಾ
ಹೊಸದಿಲ್ಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ನೀಡಿದ ಭೇಟಿಗೆ ಚೀನಾ ವಿರೋಧ ವ್ಯಕ್ತಪಡಿಸಿದೆ. ತಾನು ಯಾವತ್ತೂ ಅರುಣಾಚಲ ಪ್ರದೇಶವನ್ನು ಮಾನ್ಯ ಮಾಡಿಲ್ಲ ಎಂದೂ ಚೀನಾ ಹೇಳಿಕೊಂಡಿದೆ.
ಅಕ್ಟೋಬರ್ 9ರಂದು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ನಾಯ್ಡು ಅವರು ಅಲ್ಲಿನ ವಿಧಾನಸಭೆಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದರು.
ಆದರೆ ಅರುಣಾಚಲ ಪ್ರದೇಶಕ್ಕೆ ಭಾರತೀಯ ನಾಯಕರ ಭೇಟಿಯನ್ನು ಚೀನಾ ಆಗಾಗ ವಿರೋಧಿಸುತ್ತಲೇ ಬಂದಿದೆ. ಅರುಣಾಚಲ ಪ್ರದೇಶ ರಾಜ್ಯವು ಭಾರತದ ಅವಿಭಾಜ್ಯ ಅಂಗವೆಂದು ಭಾರತ ಯಾವತ್ತೂ ಹೇಳುತ್ತಿದೆ ಆದರೆ ಚೀನಾ ಮಾತ್ರ ಅರುಣಾಲ ಪ್ರದೇಶವು ದಕ್ಷಿಣ ಟಿಬೆಟ್ ಭಾಗ ಎಂದು ಹೇಳುತ್ತಿದೆ.
ವೆಂಕಯ್ಯ ನಾಯ್ಡು ಭೇಟಿ ಕುರಿತಂತೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ``ಭಾರತದ ಕಡೆಯಿಂದ ಏಕಪಕ್ಷೀಯವಾಗಿ ಹಾಗೂ ಅಕ್ರಮವಾಗಿ ಸ್ಥಾಪಿಸಲಾದ ಅರುಣಾಚಲ ಪ್ರದೇಶವನ್ನು ಚೀನಾ ಯಾವತ್ತೂ ಮಾನ್ಯ ಮಾಡಿಲ್ಲ ಹಾಗೂ ಅಲ್ಲಿಗೆ ಭಾರತೀಯ ನಾಯಕರ ಭೇಟಿಯನ್ನು ವಿರೋಧಿಸುತ್ತದೆ, ಗಡಿ ಸಮಸ್ಯೆ ಇನ್ನಷ್ಟು ಕ್ಲಿಷ್ಟಕರವಾಗದಂತೆ ನೋಡಿಕೊಳ್ಳುವಂತೆ ಭಾರತವನ್ನು ಕೇಳಿಕೊಳ್ಳುತ್ತೇವೆ,'' ಎಂದು ಹೇಳಿದ್ದಾರೆ.
ಪೂರ್ವ ಲಡಾಖ್‍ನಲ್ಲಿ ಕಳೆದ 17 ತಿಂಗಳಿನಿಂದ ಇರುವ ಉದ್ವಿಗ್ನತೆಯ ವಾತಾವರಣವನ್ನು ಶಮನಗೊಳಿಸಲು ಎರಡೂ ದೇಶಗಳು ವಿಫಲವಾಗಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.