ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಸಿಎಎಗೆ ತಿದ್ದುಪಡಿ ಮಾಡಿ: ಕಾಂಗ್ರೆಸ್ ನಾಯಕ ಮಿಲಿಂದ್ ದೆವ್ರಾ
ಹೊಸದಿಲ್ಲಿ: ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡುವ ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಅನ್ನು ತಿದ್ದುಪಡಿ ಮಾಡಬೇಕು ಎಂದು ಮಾಜಿ ಸಚಿವ ಮಿಲಿಂದ್ ದೆವ್ರಾ ಮಂಗಳವಾರ ಒತ್ತಾಯಿಸಿದರು.
ಕಳೆದ ವಾರ ಬಾಂಗ್ಲಾದೇಶದಲ್ಲಿ ನಡೆದ ದುರ್ಗಾ ಪೂಜೆ ಆಚರಣೆಯಲ್ಲಿ ನಡೆದ ಕೋಮು ಹಿಂಸಾಚಾರದ ವರದಿಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಘಟನೆಯನ್ನು "ಆತಂಕಕಾರಿ" ಎಂದು ಕರೆದ ಕಾಂಗ್ರೆಸ್ ನ ಹಿರಿಯ ನಾಯಕ, "ಭಾರತೀಯ ಮುಸ್ಲಿಮರನ್ನು ಬಾಂಗ್ಲಾದೇಶಿ ಇಸ್ಲಾಮಿಸ್ಟ್‌ಗಳೊಂದಿಗೆ ಸಮೀಕರಿಸುವ" ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು.
ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಕೋಮುಗಲಭೆಗಳು ಅತ್ಯಂತ ಕಳವಳಕಾರಿ. ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡುವ ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಹಾಗೂ ಪುನರ್ವಸತಿ ನೀಡಲು ಸಿಎಎ ಅನ್ನು ತಿದ್ದುಪಡಿ ಮಾಡಬೇಕು. ಭಾರತೀಯ ಮುಸ್ಲಿಮರನ್ನು ಬಾಂಗ್ಲಾದೇಶಿ ಇಸ್ಲಾಮಿಸ್ಟ್‌ಗಳೊಂದಿಗೆ ಸಮೀಕರಿಸುವ ಯಾವುದೇ ಕೋಮು ಪ್ರಯತ್ನವನ್ನು ಭಾರತವು ತಿರಸ್ಕರಿಸಬೇಕು ಹಾಗೂ ತಡೆಯಬೇಕು "ಎಂದು ದೆವ್ರಾ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಭಾರತೀಯ ಪೌರತ್ವದ ಹಾದಿಯನ್ನು ಸುಲಭಗೊಳಿಸುವ ಗುರಿಯನ್ನು ಸಿಎಎ ಹೊಂದಿದೆ.