ಅಕ್ಟೋಬರ್ ನಲ್ಲಿ ಜಿಎಸ್‌ಟಿ ಸಂಗ್ರಹ 1,30,127 ಕೋ.ರೂ.ಗೇರಿಕೆ
Update: 2021-11-01 16:40 GMT
ಹೊಸದಿಲ್ಲಿ,ನ.1: ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ 1,30,127 ಕೋ.ರೂ.ಗಳ ಜಿಎಸ್‌ಟಿ ಆದಾಯ ಸಂಗ್ರಹವಾಗಿದ್ದು,ಶೇ.23.7ರಷ್ಟು ಏರಿಕೆಯನ್ನು ದಾಖಲಿಸಿದೆ. ಇದು 2017,ಜುಲೈನಲ್ಲಿ ಜಿಎಸ್‌ಟಿ ಜಾರಿಗೆ ಬಂದ ನಂತರ ಎರಡನೇ ಅತ್ಯತ ದೊಡ್ಡ ಆದಾಯ ಸಂಗ್ರಹವಾಗಿದೆ. ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ ಮತ್ತು ತೆರಿಗೆ ವಂಚನೆಯನ್ನು ಹತ್ತಿಕ್ಕಲು ತೆರಿಗೆ ಅಧಿಕಾರಿಗಳು ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಏರಿಕೆ ದಾಖಲಾಗಿದೆ.
ಅಕ್ಟೋಬರ್‌ನಲ್ಲಿ ಸಿಜಿಎಸ್‌ಟಿ 23,861 ಕೋ.ರೂ.,ಎಸ್‌ಜಿಎಸ್‌ಟಿ 30,421 ಕೋ.ರೂ.,ಐಜಿಎಸ್‌ಟಿ 67,361 ಕೋ.ರೂ.(ಆಮದು ಮೇಲಿನ 32,998 ಕೋ.ರೂ.ಸೇರಿದಂತೆ) ಮತ್ತು ಸೆಸ್ 8,484 ಕೋ.ರೂ. ಸಂಗ್ರಹವಾಗಿವೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟಿಸಿದ್ದಾರೆ.