ಕೊಲೆಯತ್ನ ಪ್ರಕರಣ: ‘ನೋ ಹಲಾಲ್ʼ ಬೋರ್ಡ್ ಹಾಕಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಸುಳ್ಳು ಹೇಳಿದ್ದ ಮಹಿಳೆಯ ಬಂಧನ
ಕೊಚ್ಚಿ: ತನ್ನ ಹೋಟೆಲ್ ಎದುರುಗಡೆ 'ನೋ ಹಲಾಲ್' ಬೋರ್ಡ್ ಅಳವಡಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಳ್ಳು ಆರೋಪ ಹೊರಿಸಿದ್ದ ತುಷಾರ ನಂದು ಅಲಿಯಾಸ್ ತುಷಾರ ಅಜಿತ್ ಮತ್ತಾಕೆಯ ಸಹವರ್ತಿಗಳನ್ನು ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆಗೈದ ಆರೋಪದ ಮೇಲೆ ಬಂಧಿಸಲಾಗಿದೆ. ಹೋಟೆಲಿನ ಮಾಲಕತ್ವದ ಕುರಿತಂತೆ ಎದ್ದ ವಿವಾದವೇ ಈ ಹಲ್ಲೆಗೆ ಕಾರಣವೆನ್ನಲಾಗಿದೆ ಎಂದು newindianexpress.com ವರದಿ ಮಾಡಿದೆ.
ತುಷಾರ, ಆಕೆಯ ಪತಿ ಅಜಿತ್ ಹಾಗೂ ಅಪ್ಪು ಎಂಬವರು ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದರು ಹಾಗೂ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತುಷಾರಾಳ ಸಹವರ್ತಿಗಳಾದ ಅಬಿನ್ ಬೆನ್ಸಸ್ ಆಂಟನಿ (22) ಹಾಗೂ ವಿಷ್ಣು ಶಿವದಾಸ್ (26) ಎಂಬವರನ್ನೂ ಬಂಧಿಸಲಾಗಿದೆ.
ತನ್ನ ಫೇಸ್ಬುಕ್ ಖಾತೆಯ ಮೂಲಕ ಮತೀಯ ದ್ವೇಷ ಬೆಳೆಸುವ ಪೋಸ್ಟ್ ಅನ್ನು ತುಷಾರ ಮಾಡಿದ್ದಾರೆಂದು ಪೊಲೀಸರು ಆರೋಪಿಸಿದಾರೆ.
ಅಕ್ಟೋಬರ್ 24ರ ರಾತ್ರಿ ಘಟನೆ ನಡೆದಿದ್ದು. ಕೊಚ್ಚಿಯ ಕಕ್ಕನಾಡ್ ಎಂಬಲ್ಲಿ ಇನ್ಫೋಪಾರ್ಕ್ ಸಮೀಪ ಇರುವ ಡೈನ್ ಎಂಬ ಹೋಟೆಲ್ ಎದುರುಗಡೆಯಿದ್ದ ಚಾಟ್ ಮಳಿಗೆಯನ್ನು ತುಷಾರ ಮತ್ತಾಕೆಯ ಸಹವರ್ತಿಗಳು ತೆಗೆಸಿದ್ದರು. ತುಷಾರ ಒಡೆತನದ ಇನ್ನಷ್ಟೇ ತೆರೆಯಬೇಕಿರುವ ಹೋಟೆಲ್ ಸಮೀಪವೇ ನಕುಲ್ ಎಸ್ ಬಾಬು ಎಂಬವರ ಒಡೆತನದ ಡೈನ್ ರೆಸ್ಟಾರೆಂಟ್ ಇದೆ.
ನಕುಲ್ ಪ್ರಶ್ನಿಸಿದಾಗ ಆತ ಹಾಗೂ ಬಿನೊಯ್ ಜಾರ್ಜ್ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿತ್ತು.
ಇದರ ಬೆನ್ನಲ್ಲೇ ತುಷಾರ ಪೊಲೀಸ್ ದೂರು ದಾಖಲಿಸಿ ನಕುಲ್ ಮತ್ತು ಬಿನೋಜ್ ತನ್ನ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿದ್ದಳು.
ನಕುಲ್ ಕೂಡ ತನ್ನ ಮೇಲೆ ತುಷಾರ ಕಡೆಯವರು ಹಲ್ಲೆ ನಡೆಸಿದ್ದರೆಂದು ದೂರಿದ್ದ. ಪೊಲೀಸರು ತನಿಖೆ ನಡೆಸಿದಾಗ ತುಷಾರಳ ಆರೋಪದಲ್ಲಿ ಹುರುಳಿಲ್ಲವೆಂದು ತಿಳಿದು ಬಂದಿತ್ತು. ಇನ್ನೊಂದೆಡೆ ‘ನೋ ಹಲಾಲ್’ ಬೋರ್ಡ್ ಹಾಕಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿ ತುಷಾರ ಮಾಡಿದ್ದ ಫೇಸ್ಬುಕ್ ಪೋಸ್ಟ್ಗೆ ಬಲಪಂಥೀಯ ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಿದ್ದರಿಂದ ಆಕೆಯ ಆ ಸುಳ್ಳು ಸುದ್ದಿಯ ಪೋಸ್ಟ್ ವೈರಲ್ ಆಗಿತ್ತು.