ಭೋಪಾಲ್ ಆಸ್ಪತ್ರೆ ಅಗ್ನಿ ಅವಘಡ: 7 ಮಕ್ಕಳನ್ನು ರಕ್ಷಿಸಿದ ರಶೀದ್‍ಗೆ ತನ್ನ ಸೋದರಿಯ ಮಗುವನ್ನು ಕಾಪಾಡಲು ಸಾಧ್ಯವಾಗಲಿಲ್ಲ

Update: 2021-11-10 08:28 GMT
Photo: Indianexpress

ಭೋಪಾಲ್: ಸೋಮವಾರ ಭೋಪಾಲ್ ನಗರದ ಕಮಲಾ ನೆಹರೂ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ ನಾಲ್ಕು ನವಜಾತ ಶಿಶುಗಳ ಪೈಕಿ ನಗರದ ನಿವಾಸಿ ರಶೀದ್ ಖಾನ್ ಅವರ ಸಹೋದರಿಯ ಮಗು ಕೂಡ ಸೇರಿತ್ತು. .

ಸಹೋದರಿಗೆ ವಿವಾಹವಾಗಿ 12 ವರ್ಷಗಳ ನಂತರ ಹುಟ್ಟಿದ್ದ ಮುದ್ದಾದ ಮಗುವನ್ನು ಕಣ್ತುಂಬಾ ನೋಡಿ ಬೆಳಿಗ್ಗೆಯಷ್ಟೇ ರಶೀದ್ ಖಾನ್ ಆಸ್ಪತ್ರೆಯಿಂದ ಮರಳಿದ್ದರು. ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂದು ಸಹೋದರಿ ಇರ್ಫಾನಾ ಫೋನ್ ಮಾಡಿ ತಿಳಿಸುತ್ತಿದ್ದಂತೆಯೇ ಖಾನ್ ಮಗುವನ್ನು ಉಳಿಸಬೇಕೆಂದು ಆಸ್ಪತ್ರೆಗೆ ಧಾವಿಸಿದ್ದರು. ಅಲ್ಲಿ ಕಟ್ಟಡದ ಮೂರನೇ ಅಂತಸ್ತಿನಲ್ಲಿದ್ದ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎಸ್‍ಎನ್‍ಸಿಯು) ವೈದ್ಯರು ಹಾಗೂ ದಾದಿಯರು  ನವಜಾತ ಶಿಶುಗಳನ್ನು ಹೊತ್ತುಕೊಂಡು ಹೊರಕ್ಕೆ ಧಾವಿಸುತ್ತಿದ್ದರು. 

ಆ ಕ್ಷಣ ಖಾನ್ ಕೂಡ ಸಹಾಯಕ್ಕಿಳಿದರು. "ಆ ಮುಗ್ಧ ಶಿಶುಗಳನ್ನು ನಾನು ಉಳಿಸಿದರೆ ದೇವರು ನನ್ನ ಕುಟುಂಬದ ಮಗುವನ್ನೂ ಉಳಿಸುತ್ತಾನೆ" ಎಂದು ದೃಢವಾಗಿ ನಂಬಿದ ಖಾನ್ ರಕ್ಷಣಾ ಕಾರ್ಯದಲ್ಲಿ ಧುಮುಕಿ ಎಂಟು ಶಿಶುಗಳನ್ನು ಉಳಿಸಿದ್ದರೂ ಅವರ ಎಂಟು ದಿನ ಪ್ರಾಯದ ಸೋದರಳಿಯ ರಾಹಿಲ್ ನನ್ನು ಉಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.

ಕೊಠಡಿ ತುಂಬಾ ಹೊಗೆ ಆವರಿಸಿತ್ತು. ವಯರ್ ಗಳನ್ನು ತುಂಡರಿಸಿ, ಉಪಕರಣಗಳ ತಂತಿಗಳನ್ನು ಬೇರ್ಪಡಿಸಿ ಶಿಶುಗಳನ್ನು ಹೊರಗೆ ತೆಗೆದುಕೊಂಡು ಹೋದೆವು. ಅಲ್ಲಿ ಅದೆಷ್ಟು ಗಡಿಬಿಡಿ ಇತ್ತೆಂದರೆ ನನ್ನ ಸೋದರಳಿಯನನ್ನು ಉಳಿಸಲು ಸಾಧ್ಯವಾಗಲಿಲ್ಲ. ಎಲ್ಲಾ ಎಂಟು ಶಿಶುಗಳನ್ನು  ರಕ್ಷಿಸಲಾಗಿದೆ ಎಂದು ಹೇಳಲಾಯಿತು. ಆಗ ಅವರ ಕುಟುಂಬದ ಮಗುವಿಗಾಗಿ ಹುಡುಕಿದಾಗ ಶವಾಗಾರದಲ್ಲಿ ಪರಿಶೀಲಿಸುವಂತೆ ಅವರಿಗೆ ಹೇಳಲಾಗಿತ್ತು.

ಅಲ್ಲಿ ರಾಹಿಲ್ ಪಕ್ಕದಲ್ಲಿಯೇ ಅಂಕುಶ್ ಯಾದವ್ ಅವರ  ಒಂದು ದಿನ ಪ್ರಾಯದ ಶಿಶುವಿನ ಮೃತದೇಹ ಕೂಡ ಇತ್ತು. ಸೋಮವಾರವಷ್ಟೇ ಅಂಕುಶ್ ಮತ್ತು ರಚನಾ ಅವರಿಗೆ ಅವಳಿ ಶಿಶುಗಳು ಜನಿಸಿದ್ದವು. ಶಿಶುಗಳಿಗೆ ಆಕ್ಸಿಜನ್ ಅಗತ್ಯವಿದ್ದುದರಿಂದ ಹಾಗೂ ಖಾಸಗಿ ಆಸ್ಪತ್ರೆಯ ದುಬಾರಿ ಶುಲ್ಕ ಪಾವತಿಸಲು ಅಸಾಧ್ಯವೆಂದು ಅವರು ಶಿಶುವನ್ನು ಈ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು.

ಕೃಪೆ: Indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News