ಟಿಎಂಸಿ ನಾಯಕಿ ಸಯಾನಿ ಘೋಷ್ ಗೆ ಜಾಮೀನು
Update: 2021-11-22 18:18 GMT
ಹೊಸದಿಲ್ಲಿ: ಕ್ರಿಮಿನಲ್ ಬೆದರಿಕೆ ಹಾಗೂ ಕೊಲೆ ಯತ್ನ ಆರೋಪದ ಮೇಲೆ ಬಂಧನಕ್ಕೀಡಾದ ಮರುದಿನ ತೃಣಮೂಲ ಕಾಂಗ್ರೆಸ್ ನಾಯಕಿ ಸಯಾನಿ ಘೋಷ್ ಅವರಿಗೆ ಪಶ್ಚಿಮ ತ್ರಿಪುರಾ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯವು 20,000 ರೂಪಾಯಿಗಳ ಜಾಮೀನು ಬಾಂಡ್ ನೊಂದಿಗೆ ಸೋಮವಾರ ಜಾಮೀನು ನೀಡಿದೆ.
ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಚುನಾವಣಾ ರ್ಯಾಲಿಯಲ್ಲಿ ನೆರೆದಿದ್ದ ಜನರ ಮೇಲೆ ಸ್ಫೋಟಕಗಳನ್ನು ಎಸೆದು, ಕಲ್ಲು ತೂರಿದರು ಎಂಬ ಆರೋಪದ ಮೇಲೆ ರವಿವಾರ ಸಂಜೆ ಘೋಷ್ ರನ್ನು ಬಂಧಿಸಲಾಯಿತು.
ಹೈಕೋರ್ಟ್ ಪಬ್ಲಿಕ್ ಪ್ರಾಸಿಕ್ಯೂಟರ್ ರತನ್ ದತ್ತಾ, ಪಶ್ಚಿಮ ತ್ರಿಪುರಾ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಸ್ವಜಿತ್ ದೇಬ್ ಮತ್ತು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿದ್ಯುತ್ ಸೂತ್ರಧರ್ ಅವರು ಸರಕಾರದ ಪರವಾಗಿ ಪ್ರಕರಣವನ್ನು ಮಂಡಿಸಿದರು ಮತ್ತು ಘೋಷ್ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.