ದಿಲ್ಲಿ ಹಿಂಸಾಚಾರ: ಆರೋಪಿಯನ್ನು ದೋಷಿಯೆಂದು ನಿರ್ಣಯಿಸಿದ್ದರೂ, ಜೀವಭಯದಲ್ಲಿ ವಾಸಿಸುತ್ತಿರುವ ಸಂತ್ರಸ್ತ ಕುಟುಂಬ

Update: 2021-12-08 10:17 GMT
Photo: Indianexpress.com

ಹೊಸದಿಲ್ಲಿ: ಫೆಬ್ರವರಿ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಭಾಗೀರಥಿ ವಿಹಾರದಲ್ಲಿದ್ದ ಮನೋರಿ ಎಂಬ 67 ವರ್ಷದ ಮಹಿಳೆಯ ಎರಡಂತಸ್ತಿನ ಕಟ್ಟಡಕ್ಕೆ ನುಗ್ಗಿದ್ದ 100 ಮಂದಿಯಷ್ಟಿದ್ದ ತಂಡ  ಮನೆಗೆ ಬೆಂಕಿ ಹಚ್ಚಿ ಹಲವಾರು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿತ್ತು. ಆಗ ಮನೆಯಲ್ಲಿದ್ದ ಮರೋರಿ ತಮ್ಮ ಪುತ್ರಿ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಕರೆದುಕೊಂಡು  ಅಲ್ಲಿಂದ ಬರಿಗೈಯ್ಯಲ್ಲಿ ತಪ್ಪಿಸಿಕೊಂಡು ಒಂದು ತಿಂಗಳು ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು.

ಸೋಮವಾರ ಈ ಪ್ರಕರಣದ ಆರೋಪಿಯಾಗಿದ್ದ ದಿನೇಶ್ ಯಾದವ್ ಎಂಬಾತನನ್ನು ದಿಲ್ಲಿಯ ನ್ಯಾಯಾಲಯವೊಂದು ತಪ್ಪಿತಸ್ಥ ಎಂದು ಘೋಷಿಸಿದೆ. ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಮೊದಲ ಶಿಕ್ಷೆ ಘೋಷಣೆಯಾದ ಪ್ರಕರಣವೂ ಇದಾಗಿದೆ.

ಆದರೆ ಈ ವಿಚಾರ ಮನೋರಿ ಅವರಿಗೆ ತಿಳಿದಿರಲಿಲ್ಲ. ಈಗ ಅವರ ಮನೆಯನ್ನು  ಸ್ಥಳೀಯ ಮಸೀದಿ ಒದಗಿಸಿದ ದೇಣಿಗೆಯೊಂದಿಗೆ  ದುರಸ್ತಿಗೊಳಿಸಲಾಗಿದೆ. ಆದರೆ ಮನೋರಿ ಅವರ ಕುಟುಂಬವಿನ್ನೂ ಜೀವಭಯದಲ್ಲಿಯೇ ಅಲ್ಲಿ ವಾಸಿಸುತ್ತಿದೆ. ದಿಲ್ಲಿ ಸರಕಾರ ರೂ 50,000 ಪರಿಹಾರ ಒದಗಿಸಿತ್ತು. ಆದರೆ ಅದು ಲಾಕ್‍ಡೌನ್ ವೇಳೆ ಖರ್ಚಾಗಿ ಹೋಯಿತು ಎಂದು ಕುಟುಂಬ ತಿಳಿಸುತ್ತದೆ.

ಪ್ರಕರಣದ ಆರೋಪಿಗೆ ಶಿಕ್ಷೆಯಾಗಿರುವ ಕುರಿತು ಅವರಲ್ಲಿ ಹೇಳಿದಾಗ "ಖುಷಿಪಡಬೇಕೋ ಎಂದು ತಿಳಿದಿಲ್ಲ. ಇಲ್ಲಿ ಸುರಕ್ಷಿತವೆಂದು ಅನಿಸುವುದಿಲ್ಲ. ನನ್ನ ಪುತ್ರಿಯ ಕೈ ಹಿಡಿದುಕೊಂಡು ಇಲ್ಲಿಂದ ಆ ದಿನ ಓಡಿ ಹೋದ  ಘಟನೆ ಇನ್ನೂ ಮನಸ್ಸಿನಲ್ಲಿದೆ. ಆ ದಿನ ಪ್ರೀತಿ ಸತ್ತು ಹೋಯಿತು, ನನ್ನ ಮನಸ್ಸು ಈಗಲೂ ನೋಯುತ್ತಿದೆ" ಎಂದರು.

ಮನೋರಿ ಅವರ ಇಬ್ಬರು ಮೊಮ್ಮಕ್ಕಳು ಸ್ಥಳೀಯ ಸ್ಟೀಲ್ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.  ಪುತ್ರ  ಅವರ ಜತೆಗಿರಲು ಕೆಲಸಕ್ಕೆ ಹೋಗುವುದನ್ನು ಆಗಾಗ ತಪ್ಪಿಸಿಕೊಳ್ಳುತ್ತಾರೆ. ಅವರ ಪುತ್ರಿ ಕೂಡ ಆಗಾಗ ಮಾನಸಿಕ ಆಘಾತಕ್ಕೊಳಗಾಗುತ್ತಗಿದ್ದಾರೆ ಎಂದು ಮನೋರಿ ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News