ಗ್ರಾಮಗಳಿಗೆ ಬಿಎಸ್‌ಎಫ್‌ ಪ್ರವೇಶಿಸಲು ಅವಕಾಶ ನೀಡಬೇಡಿ: ಪೊಲೀಸರಿಗೆ ಮಮತಾ ಬ್ಯಾನರ್ಜಿ ಸೂಚನೆ

Update: 2021-12-10 08:29 GMT
ಮಮತಾ ಬ್ಯಾನರ್ಜಿ (File Photo: PTI)

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಮತ್ತೊಮ್ಮೆ ಗಡಿ ರಾಜ್ಯಗಳಲ್ಲಿ ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಸ್ತಾಪಿಸಿ ಅನುಮತಿಯಿಲ್ಲದೆ ಬಿಎಸ್‌ಎಫ್ ಸಿಬ್ಬಂದಿ ಗ್ರಾಮಗಳಿಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ರಾಜ್ಯ ಪೊಲೀಸರಿಗೆ ಸೂಚನೆ ನೀಡಿದ್ದರು.

 ರಾಜ್ಯಪಾಲ ಜಗದೀಪ್ ಧಂಖರ್ ಅವರು ಸಿಎಂಗೆ ಪತ್ರ ಬರೆದಿದ್ದು, ಮಮತಾ ಅವರ ನಿಲುವು ಒಕ್ಕೂಟ  ರಾಜಕೀಯ ಹಾಗೂ  ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.

ನಾಡಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ ನಡೆದ ಆಡಳಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಭದ್ರತಾ ಚೆಕ್‌ಪೋಸ್ಟ್‌ಗಳಲ್ಲಿ (ನಾಕಾ) ಹೆಚ್ಚು ಕಟ್ಟುನಿಟ್ಟಾಗಿ ಶೋಧ ನಡೆಸುವಂತೆ ಜಿಲ್ಲಾ ಪೊಲೀಸರಿಗೆ ಸೂಚಿಸಿದರು.

 “ಬಾಂಗ್ಲಾದೇಶದ ಗಡಿಯು ಕರೀಂಪುರದಿಂದ ಆರಂಭವಾಗುತ್ತದೆ. ನೀವು ಈ ಪ್ರದೇಶದಲ್ಲಿನ ಎಲ್ಲಾ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಬಿಎಸ್ ಎಫ್  ಗಡಿ ಗ್ರಾಮಗಳನ್ನು ಪ್ರವೇಶಿಸುವುದಿಲ್ಲ ಹಾಗೂ ನಿಮ್ಮ ಅರಿವಿಲ್ಲದೆ ಅಥವಾ ಅನುಮತಿಯಿಲ್ಲದೆ ಯಾವುದೇ ಚಟುವಟಿಕೆಯನ್ನು ನಡೆಸುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಬಿಎಸ್‌ಎಫ್ ತನಗೆ ನೀಡಲಾದ ಕೆಲಸವನ್ನು ಮಾಡುತ್ತದೆ. ಆದರೆ ಪೊಲೀಸರು ಪೊಲೀಸ್ ಕೆಲಸವನ್ನು ನೋಡಿಕೊಳ್ಳುತ್ತಾರೆ. ಕಾನೂನು ಹಾಗೂ ಸುವ್ಯವಸ್ಥೆ ರಾಜ್ಯದ ವಿಷಯವಾಗಿದೆ. ಸಾಮಾನ್ಯ ನಾಗರಿಕರ ಮೇಲೆ ಯಾವುದೇ ರೀತಿಯ ದಬ್ಬಾಳಿಕೆಯನ್ನು ನಾನು ಸಹಿಸುವುದಿಲ್ಲ ”ಎಂದು ಅವರು ಅಧಿಕಾರಿಗಳಿಗೆ ಹೇಳಿದ್ದರು.

ಬಾಂಗ್ಲಾದೇಶ ಹಾಗೂ  ಪಾಕಿಸ್ತಾನದೊಂದಿಗೆ ತಮ್ಮ ಗಡಿಯನ್ನು ಹಂಚಿಕೊಳ್ಳುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ  ಪಂಜಾಬ್‌ಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯ ವ್ಯಾಪ್ತಿಯನ್ನು 15 ಕಿ.ಮೀ ನಿಂದ 50 ಕಿ.ಮೀ ವರೆಗೆ ವಿಸ್ತರಿಸಿ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಇತ್ತೀಚೆಗೆ ಆದೇಶ ಹೊರಡಿಸಿತ್ತು.

ಪಶ್ಚಿಮ ಬಂಗಾಳ ಹಾಗೂ  ಪಂಜಾಬ್ ಎರಡೂ ಸರಕಾರಗಳು ತರುವಾಯ ಕೇಂದ್ರದ ಕ್ರಮವನ್ನು ವಿರೋಧಿಸಿ ಅಸೆಂಬ್ಲಿಯಲ್ಲಿ  ನಿರ್ಣಯಗಳನ್ನು ಅಂಗೀಕರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News