ದನಗಳು ಮತ್ತು ಎತ್ತುಗಳ ಕುರಿತು ಹಾಸ್ಯ ಮಾಡುವವರು ಅವುಗಳನ್ನೇ ಅವಲಂಬಿಸಿದ್ದಾರೆ: ಪ್ರಧಾನಿ ಮೋದಿ
Update: 2021-12-23 14:30 GMT
ವಾರಣಾಸಿ : "ಗೋವು ನಮಗೆ ಮಾತೆ ಸಮಾನ ಹಾಗೂ ಪವಿತ್ರವಾಗಿದೆ ಆದರೆ ಕೆಲವರು ಇದನ್ನು 'ಪಾಪ' ಎಂದು ತಿಳಿಯುತ್ತಾರೆ ಮತ್ತು ಕೋಟ್ಯಂತರ ಜನರ ಜೀವನೋಪಾಯ ಇದನ್ನು ಅವಲಂಬಿಸಿದೆ ಎಂದು ಅರ್ಥ ಮಾಡಿಕೊಳ್ಳುತ್ತಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ರೂ 2,095 ಕೋಟಿ ವೆಚ್ಚದ 27 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ರ್ಯಾಲಿಯೊಂದನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ವಿಪಕ್ಷಗಳನ್ನು ವ್ಯಂಗ್ಯವಾಡಿದ ಪ್ರಧಾನಿ, "ದನಗಳು ಮತ್ತು ಎತ್ತುಗಳ ಕುರಿತು ಹಾಸ್ಯ ಮಾಡುವವರು ಕೋಟ್ಯಂತರ ಜನರು 'ಪಶುಧನ್' (ಜಾನುವಾರುಗಳು) ಅನ್ನು ಅವಲಂಬಿಸಿದ್ದಾರೆ ಎಂಬುದನ್ನು ಮರೆತಿದ್ದಾರೆ" ಎಂದರು.
ಸಮಾಜವಾದಿ ಪಕ್ಷದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ "ಅವರ ನಿಘಂಟಿನಲ್ಲಿ 'ಮಾಫಿಯಾವಾದ್' ಮತ್ತು 'ಪರಿವಾರ್ ವಾದ್ʼ ಇದೆ ಆದರೆ ನಮಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಆದ್ಯತೆಯಾಗಿದೆ,'' ಎಂದು ಹೇಳಿದರು.