ಕೇವಲ ನಾಲ್ಕೂವರೆ ರೂಪಾಯಿಗೆ ಪುತ್ತೂರು ಮಂಗಳೂರು ಮಧ್ಯೆ ರೈಲಿನಲ್ಲಿ ಪ್ರಯಾಣಿಸಿ

Update: 2022-01-14 05:47 GMT

ತಿಳಿದೋ ಅಥವಾ ತಿಳಿಯದೆಯೋ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನತೆಗೆ ನೀಡುವಂತಹ ಬಹಳಷ್ಟು ಸಹಾಯಗಳು ಬಳಕೆಯಾಗದೆ ‘ನೀರಲ್ಲಿ ಹೋಮ’ ಮಾಡಿದಂತಾಗುತ್ತದೆ.

ಮಂಗಳೂರಿನಿಂದ ಪುತ್ತೂರಿಗೆ ಖಾಸಗಿ, ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ರೂ. 45 ದರವಿದೆ. ಅಂದರೆ ಪುತ್ತೂರಿನಿಂದ ಮಂಗಳೂರಿಗೆ ಬಸ್ಸಲ್ಲಿ ಹೋಗಿಬರಲು 90 ರೂಪಾಯಿಗಳು ಬೇಕು. ಆದರೆ ಮಂಗಳೂರು-ಪುತ್ತೂರು ನಡುವೆ ಒಂದು ತಿಂಗಳ ಮಾಸಿಕ ಪಾಸು ದರ ಕೇವಲ ರೂ. 270. ಅಂದರೆ ಪ್ರತಿದಿನ ರೈಲಲ್ಲಿ ಹೋಗಿ ಬರಲು ತಗಲುವ ವೆಚ್ಚ ಜುಜುಬಿ 9 ರೂಪಾಯಿಗಳು ಮಾತ್ರ. ಬಸ್ಸಲ್ಲಿ ಇದರ ಹತ್ತು ಪಟ್ಟು ಜಾಸ್ತಿ. 90 ರೂಪಾಯಿ.

ಒಂದು ಅಂದಾಜಿನಂತೆ ಪ್ರತಿ ದಿನ ತಮ್ಮ ವಿವಿಧ ಕೆಲಸ ಕಾರ್ಯಗಳಿಗಾಗಿ ಸುಮಾರು 1,280 ಜನರು ಪುತ್ತೂರು ಆಸುಪಾಸಿನಿಂದ ಮಂಗಳೂರಿಗೆ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇವರಲ್ಲಿ 98 ಶೇಕಡಾ ಜನರಿಗೆ ಅವರು ಬಸ್‌ಗೆ ನೀಡುವ ದರದ ಹತ್ತನೇ ಒಂದು ಭಾಗ ದರದಲ್ಲಿ ಪುತ್ತೂರು-ಮಂಗಳೂರು ಮಧ್ಯೆ ಓಡಾಡಬಹುದು ಎಂದು ತಿಳಿದೇ ಇಲ್ಲ.

ರೈಲು ನಿಗದಿತ ಸಮಯಕ್ಕೆ ಹೊರಟು ಪೂರ್ವ ನಿಗದಿತ ವೇಳೆಯಲ್ಲಿಯೇ ತಲುಪುತ್ತಿದೆ. ಮಂಗಳೂರು -ಪುತ್ತೂರು ಮಧ್ಯೆ ಓಡಾಟ ನಡೆಸುವ ಪ್ಯಾಸೆಂಜರ್ ರೈಲು ಒಂದು ದಿನವೂ ತಡವಾಗಿ ತಲುಪಿದ ನಿದರ್ಶನವಿಲ್ಲ. ವೃದ್ಧರಿಗೆ, ಮಧುಮೇಹಿಗಳಿಗೆ, ಮಕ್ಕಳಿಗೆ ನೆರವಾಗುವಂತೆ ರೈಲಿನೊಳಗೆ ಶೌಚಾಲಯ, ವಾಶ್‌ಬೇಸಿನ್ ಇದೆ. ಚಹಾ, ಕಾಫಿ, ತಿಂಡಿ ಇತ್ಯಾದಿ ರೈಲಿನೊಳಗೆಯೇ ಸಿಗುತ್ತಿದೆ. ರೈಲು ಬಸ್ಸಿನಂತೆ ಅಲ್ಲಾಡುವುದಿಲ್ಲ. ಬಸ್ಸಿನಂತೆ ಒಮ್ಮೆಲೇ ಬ್ರೇಕ್ ಹಾಕುವುದಿಲ್ಲ. ಎಲ್ಲರೂ ಕುಳಿತು ಪ್ರಯಾಣಿಸಬಹುದು. ದಿನವೂ ಪುತ್ತೂರು-ಮಂಗಳೂರು ಓಡಾಡುವ ಸಾರ್ವಜನಿಕರು ಇಷ್ಟೆಲ್ಲ ಸವಲತ್ತುಗಳಿರುವ ಪ್ಯಾಸೆಂಜರ್ ರೈಲನ್ನು ಬಳಸಬೇಕು ಅನ್ನಿಸುತ್ತಿದೆ. ತಿಂಗಳಿಗೆ ಕೇವಲ 3 ಬಾರಿ ಪುತ್ತೂರಿನಿಂದ ಮಂಗಳೂರಿಗೆ ಹೋಗುವವರು ಕೂಡ (90x3) 270 ರೂ. ಬಸ್ಸಿಗೆ ನೀಡುವುದರ ಬದಲು ಇದೇ ರೂ. 270 ಬಳಸಿ ತಿಂಗಳ ರೈಲು ಪಾಸು ಮಾಡುವುದೇ ಲೇಸಲ್ಲವೇ?

-ಒಲಿವರ್ ಡಿ’ ಸೋಜಾ,

ಕಾರ್ಯಕಾರಿ ಕಾರ್ಯದರ್ಶಿ,

 ರೈಲ್ವೇ ಯಾತ್ರಿ ಸಂಘ, ಮುಂಬೈ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News