ಕೊರೋನ ಬಾಧಿತ ಬೈಂದೂರು ವಸತಿ ಶಾಲೆಗೆ ಸಚಿವ ಕೋಟ ಭೇಟಿ
ಬೈಂದೂರು, ಜ.29: ಒಟ್ಟು 101 ಮಂದಿ ಮಕ್ಕಳಿಗೆ ಕೊರೋನ ಸೋಂಕು ದೃಢಪಟ್ಟ ಬೈಂದೂರು ತಾಲೂಕು ಕಂಬದಕೋಣೆಯಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.
ಒಟ್ಟು ಸುಮಾರು 236 ಮಕ್ಕಳಿರುವ ವಸತಿಶಾಲೆಯಲ್ಲಿ 101 ಮಕ್ಕಳಿಗೆ ಕೊರೊನ ಪಾಸಿಟಿವ್ ಪ್ರಕರಣ ಬಂದ ಹಿನ್ನೆಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಎಲ್ಲಾ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಿದರು. ಕೋವಿಡ್ ಪಾಸಿಟಿವ್ ಬಂದ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಪಾಸಿಟಿವ್ ಬಂದ ಮಕ್ಕಳ ಆರೋಗ್ಯ ಸ್ಥಿರವಾಗಿದ್ದು ಯಾವುದೇ ರೀತಿಯ ಆತಂಕಕ್ಕೆ ಕಾರಣಗಳಿಲ್ಲ ಎಂದವರು ನುಡಿದರು.
ಈ ಸಂದರ್ಭದಲ್ಲಿ ಬಾಧಿತ ಮಕ್ಕಳೊಂದಿಗೆ ಮಾತನಾಡಿದ ಸಚಿವ ಕೋಟ, ಯಾರೂ ಹೆದರುವ ಅಗತ್ಯವಿಲ್ಲ. ಎಲ್ಲಾ ಅವಶ್ಯಕ ವೈದ್ಯಕೀಯ ಸೌಲಭ್ಯ, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿ ದೇವೇಂದ್ರಪ್ಪ ಬಿರಾದರ್, ಗ್ರಾಪಂ ಅಧ್ಯಕ್ಷ ಸುಖೇಶ್ ಶೆಟ್ಟಿ, ಗ್ರಾಪಂ ಸದಸ್ಯರಾದ ಉದಯ್ ಕುಮಾರ್ ಶೆಟ್ಟಿ, ಸತೀಶ, ಸುಬ್ರಹ್ಮಣ್ಯ, ರಮೇಶ್, ಗಣೇಶ್ ಭಾಗವಹಿಸಿದ್ದರು.